ಕರ್ನಾಟಕ

ಪಕ್ಷೇತರ ಅಭ್ಯರ್ಥಿ ಹಾಗೂ ಆಕೆಯ ಪತಿ ಅಪಹರಣ

Pinterest LinkedIn Tumblr

kidಬೆಂಗಳೂರು, ಆ.10- ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಇಂದು ಪಕ್ಷೇತರ ಅಭ್ಯರ್ಥಿ ಹಾಗೂ ಆಕೆಯ ಪತಿಯನ್ನು ಅಪಹರಿಸಿರುವ ಘಟನೆ ಯಲಹಂಕದಲ್ಲಿ ನಡೆದಿದೆ.ಅಪಹರಣಕ್ಕೊಳಗಾಗಿರುವ ದಂಪತಿಯನ್ನು ನಾಗಲಕ್ಷ್ಮಿ ಹಾಗೂ ಚಂದ್ರಶೇಖರ್ ಎನ್ನಲಾಗಿದೆ.ಯಲಹಂಕ ವಿಭಾಗದ ಚೌಡೇಶ್ವರಿ ವಾರ್ಡ್ ನಂ.2ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಮಾಜ ಸೇವಕಿ ನಾಗಲಕ್ಷ್ಮಿ ನಿರ್ಧರಿಸಿದ್ದರು.

ಆದರೆ ಇಂದು ಮುಂಜಾನೆ 4 ಗಂಟೆಗೆ ಅಪರಿಚಿತ ವ್ಯಕ್ತಿಗಳು ನಾಗಲಕ್ಷ್ಮಿ ಹಾಗೂ ಚಂದ್ರಶೇಖರ್ ಅವರನ್ನು ಅಪಹರಿಸಿ ತಮಿಳುನಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.ಚುನಾವಣೆಯಲ್ಲಿ ಸ್ಪರ್ಧಿಸಲು ಪತ್ನಿ ನಾಗಲಕ್ಷ್ಮಿ ನಿರ್ಧರಿಸಿದ್ದರು. ಹೀಗಾಗಿ ನಮಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತೀವೆ ಎಂದು ಚಂದ್ರಶೇಖರ್ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ನಿವಾಸದ ಎದುರು ಅನಾಮಧೇಯ ವಾಹನಗಳು ನಿಲ್ಲುತ್ತಿವೆ. ನಮಗೆ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ಅಲವತ್ತುಕೊಂಡಿದ್ದರು. ಆದರೂ ಇಂದು ಮುಂಜಾನೆ 4 ಗಂಟೆಗೆ ಅಪರಿಚಿತ ವ್ಯಕ್ತಿಗಳು ದಂಪತಿಯನ್ನು ಅಪಹರಿಸಿದ್ದಾರೆ.ಯಲಹಂಕದ ಪ್ರಭಾವಿ ವ್ಯಕ್ತಿಗಳು ಈ ಕೃತ್ಯದ ಹಿಂದೆ ಇರಬಹುದು ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Write A Comment