ಕಾರವಾರ: ಕಾಲೇಜಿಗೆ ಹೋಗಲು ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಎಲ್ಲಿಲ್ಲದ ಉತ್ಸಾಹ. ಆದರೆ ಈ ಕಾಲೇಜಿನ ವಿದ್ಯಾರ್ಥಿಗಳು ಸೊಳ್ಳೆಕಾಟ ತಾಳಲಾರದೇ ಕಾಲೇಜಿಗೆ ಬರುವುದನ್ನೇ ನಿಲ್ಲಿಸಿದ್ದಾರೆ.
ಸೊಳ್ಳೆ ವಿಪರೀತವಾಗಿದ್ದು, ಕಾಲೇಜಿನಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ನಿಲ್ಲುವಂತಿಲ್ಲ, ಕೂರುವಂತಿಲ್ಲ. ಸೊಳ್ಳೆ ಕಡಿತದಿಂದ ಮೈಯೆಲ್ಲ ಕಡಿತ ಬರುತ್ತದೆ. ಪಾಠ ಕೇಳುವುದನ್ನು ಬಿಟ್ಟು ಸೊಳ್ಳೆ ಹೊಡೆಯುವುದೇ ಕೆಲಸವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಿ ಪಿಯು ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಸ್ಥಳೀಯ ಶಾಸಕರಿಗೆ ವಿದ್ಯಾರ್ಥಿಗಳು, ನಮ್ಮನ್ನು ಸೊಳ್ಳೆ ಕಾಟದಿಂದ ಮುಕ್ತರನ್ನಾಗಿ ಮಾಡಿ. ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಲಾಗುವುದು. ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.