ಕರ್ನಾಟಕ

ನ್ಯಾಯಾಲಯದಲ್ಲಿನ ಪ್ರಕರಣದ ಬಗ್ಗೆ ರಾಜಿಗೆ ಒಪ್ಪದಿದ್ದಕ್ಕೆ ಯುವಕನನ್ನು ಇರಿದು ಕೊಲೆ

Pinterest LinkedIn Tumblr

999Murder_WEB-300x214

ಬೆಂಗಳೂರು, ಆ.12: ಹೊಡೆದಾಟದ ಹಳೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ರಾಜಿಯಾಗಲು ಬಯಸದ ಯುವಕನೊಬ್ಬನನ್ನು ಮತ್ತೊಬ್ಬ ಯುವಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ದುರ್ಘಟನೆ ನಿನ್ನೆ ರಾತ್ರಿ ಆರ್‌ಟಿ ನಗರದ ಚಾಮುಂಡಿನಗರದಲ್ಲಿ ನಡೆದಿದೆ.

ಚಾಮುಂಡಿನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಿಯಾಜ್ ಪಾಷ (27) ಕೊಲೆಯಾದವರು. ಈತನ ಎದೆ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ನಯಾಜ್‌ಪಾಷನನ್ನು ಆರ್‌ಟಿ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.

ರಿಯಾಜ್ ಪಾಷ ಹಾಗೂ ನಯಾಜ್ ಪಾಷನಿಗೆ 2013ರ ಜನವರಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದಿತ್ತು. ಈ ಪ್ರಕರಣ ಆರ್‌ಟಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾತಿ ನ್ಯಾಯಾಲಯದ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭಗೊಂಡಾಗ ಅದನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನಯಾಜ್ ಪಾಷ ಬಯಸಿದ್ದು, ಅದಕ್ಕಾಗಿ ರಿಯಾಜ್ ಬಳಿಗೆ ಸ್ನೇಹಿತರನ್ನು ಕಳುಹಿಸಿ ಕೇಳಿಕೊಂಡಿದ್ದ. ಆದರೆ ರಾಜಿಗೆ ರಿಯಾಜ್ ಒಪ್ಪಿರಲಿಲ್ಲ. ರಿಯಾಜ್‌ನ ವರ್ತನೆಯಿಂದ ಬೇಸತ್ತ ನಯಾಜ್ ರಾತ್ರಿ 10.30ರಲ್ಲಿ ಚಾಮುಂಡಿನಗರದ ಬಳಿ ರಿಯಾಜ್ ಮನೆಗೆ ನಡೆದುಕೊಂಡು ಹೋಗುವಾಗ ಇಬ್ಬರು ಸಹಚರರೊಂದಿಗೆ ಅಡ್ಡಗಟ್ಟಿ ಚಾಕುವಿನಿಂದ ಎದೆ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ರಿಯಾಜ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಆರ್‌ಟಿನಗರ ಪೊಲೀಸರು ಪ್ರಕರಣ ದಾಖಲಿಸಿ ನಯಾಜ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment