ಮಂಡ್ಯ: ಎರಡು ವರ್ಷಗಳ ಹಿಂದೆ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಕಳುವಾಗಿದ್ದ 36 ಆಭರಣಗಳ ಪೈಕಿ 4 ಆಭರಣಗಳನ್ನು ಮರಳಿ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.
ಇಂದು ಹುಂಡಿ ಎಣಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೆಲುವನಾರಾಯಣ ಸ್ವಾಮಿಗೆ ಸೇರಿದ ಪದಕ, ಶಂಖ, ಚಕ್ರ ಹಾಗೂ ಮತ್ತೊಂದು ಆಭರಣವನ್ನು ಹುಂಡಿಯಲ್ಲಿ ಹಾಕಲಾಗಿದೆ. ಎರಡು ವರ್ಷಗಳ ಬಳಿಕ ಈ ಆಭರಣಗಳನ್ನು ಕಳ್ಳರು ಹುಂಡಿಗೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.
ಚೆಲುವನಾರಾಯಣ ಸ್ವಾಮಿಗೆ ಸೇರಿರುವ ಆಭರಣಗಳು ಕಳುವಾದ ವೇಳೆ ಇದಕ್ಕೆ ಅರ್ಚಕರೇ ಕಾರಣವೆಂದು ಕೆಲವರು ಆರೋಪಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಕಳುವಾದ ಆಭರಣಗಳ ಪೈಕಿ 4 ಆಭರಣಗಳು ಹುಂಡಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.