ಅನಂತಪುರ: ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಆಂಧ್ರ ಪೊಲೀಸರು ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬುಧವಾರ ಬಂಧಿಸಿದ್ದಾರೆ.
ಆದರೆ ವಿಚಾರಣೆ ವೇಳೆ ಆರೋಪಿಗಳು ಆತಂಕಕಾರಿ ವಿಚಾರ ಬಾಯ್ಬಿಟ್ಟಿದ್ದಾರೆ. ಕರ್ನಾಟಕ ರಾಜ್ಯದ ಸಂಸದರಿಗೆ ಗನ್ ನೀಡಿರುವಂತಹ ಮಾಹಿತಿ ಹೊರಹಾಕಿದ್ದಾರೆ. ಆಂಧ್ರದಿಂದ ಬಳ್ಳಾರಿಗೆ ಅಕ್ರಮ ಪಿಸ್ತೂಲ್ ಸಾಗಾಟ ಮಾಡಲಾಗಿದೆ ಎಂಬ ವಿಷಯ ತಿಳಿದು ಬಂದಿದೆ.
ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದ ಆಂಧ್ರ ಪೊಲೀಸರು ಅನಂತಪುರ ರೈಲ್ವೆ ನಿಲ್ಧಾಣದ ಬಳಿ ನಾಲ್ವರು ಆರೋಪಿಗಳನ್ನಾ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಅನಂತಪುರ ಪೊಲೀಸರು, ಧರ್ಮವರಂನ ದೋಸ್ತಿ ಪೊಳ್ಳಾರೆಡ್ಡಿ, ಕಮ್ಸಾಲಿ ಭಾಸ್ಕರಾಚಾರಿ, ಚಾಲಿಚಿಮ್ಮಲ ಸೂರ್ಯನಾರಾಯಣ ಹಾಗೂ ಉರ್ವಾಕೊಂಡ ಮಂಡಲದ ಕಲ್ಯಾಣ್ ಕುಮಾರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಯುಎಸ್ ಮೆಡ 9ಎಂಎಂ ಮತ್ತು ಇಂಗ್ಲೆಂಡ್ ನ ಪಾಯಿಂಟ್ 32 ರಿವಾಲ್ವಾರ್ ಹಾಗೂ ಒಂದು ಖಾಲಿ ಮ್ಯಾಗ್ಸೀನನ್ನಾ ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಶಸ್ತ್ರಾಸ್ತ್ರ ಮಾರಾಟಕ್ಕೆ ಬಳ್ಳಾರಿಯೇ ಮಾರ್ಕೆಟ್ ಎಂದು ಆರೋಪಿಗಳು ಹೇಳಿದ್ದಾರೆ.
ಅಕ್ರಮವಾಗಿ ಸಾಗಿಸುವ ಈ ರಿವಾಲ್ವರ್ ಗಳನ್ನಾ ಬಳ್ಳಾರಿಯಲ್ಲಿ ಮಾರಾಟ ಮಾಡುತ್ತಿದ್ದೆವು ಎಂದು ಹೇಳಿರುವ ಬಂಧಿತ ಆರೋಪಿ ಕಲ್ಯಾಣ್ ಕುಮಾರ್, ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೂ ಪಿಸ್ತೂಲ್ ಕೊಟ್ಟಿದ್ದೆವು ಎಂದು ತಿಳಿಸಿದ್ದಾನೆ.
2002ರಲ್ಲಿ ರಂಗಾರೆಡ್ಡಿ ಅವರ ಸೂಚನೆ ಮೇರೆಗೆ ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಒಂದು ಪಿಸ್ತೂಲ್ ನೀಡಿದ್ದೆ ಎಂದು ಆರೋಪಿ ಹೇಳಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಆಂಧ್ರ ಪೊಲೀಸ್ ಅಧಿಕಾರಿ ರಾಜಶೇಕರ್ ಬಾಬು, ಶ್ರೀರಾಮುಲು ಬಳಿ ಇದೆ ಎನ್ನಲಾದ ಗನ್ ವಶಪಡಿಸಿಕೊಳ್ಳಲು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.