ಬೆಂಗಳೂರು: ಮಾಲಿನ್ಯ ನಿಯಂತ್ರಣದಲ್ಲಿ ರಾಷ್ಟ್ರದ ರಾಜಧಾನಿ ನವದೆಹಲಿಯ ಸನಿಹ ಸಾಗುತ್ತಿರುವ ಬೆಂಗಳೂರಿನಲ್ಲಿ ಮಕ್ಕಳು ತೆರೆದ ವಾಹನದಲ್ಲಿ ತೆರಳಿದರೆ ಶ್ವಾಸಕೋಶ ತೊಂದರೆ ಕಟ್ಟಿಟ್ಟ ಬುತ್ತಿ. ವಿಶ್ವ ಶ್ವಾಸಕೋಶ ದಿನದ ಅಂಗವಾಗಿ ಸರ್ಕಾರೇತರ ಸಂಸ್ಥೆಯೊಂದು ಇಂಥ ಆಘಾತಕಾರಿ ಸಮೀಕ್ಷೆಯನ್ನು ಹೊರಗೆಡವಿದೆ.
ಶಾಲೆ ಮತ್ತು ಇತರೆಡೆಗೆ ತೆರೆದ ವಾಹನದಲ್ಲಿ ತೆರಳುವ 8ರಿಂದ 14 ವರ್ಷದ ಶೇ.86 ಮಕ್ಕಳು ಶ್ವಾಸಕೋಶದ ತೊಂದರೆಗೆ ಒಳಗಾಗುತ್ತಿದ್ದಾರೆ. ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದಾಗಿ ಮುಂದೊಂದು ದಿನ ಅಸ್ತಮಾಕ್ಕೂ ಈಡಾಗಬಹುದು. ತೆರೆದ ವಾಹನದಲ್ಲಿ ತೆರಳುವುದನ್ನು ಆದಷ್ಟೂ ಕಡಿಮೆ ಮಾಡಿದರೆ ತಾತ್ಕಾಲಿಕ ಪರಿಹಾರವಾದರೂ ಲಭಿಸಲಿದೆ ಎಂದು ದೇಶದ ಪ್ರಮುಖ ನಗರಗಳಾದ ಬೆಂಗಳೂರು, ನವದೆಹಲಿ, ಕೋಲ್ಕತ ಹಾಗೂ ಮುಂಬೈನಲ್ಲಿ ಸಮೀಕ್ಷೆ ನಡೆಸಿರುವ ಹೀಲ್ ಫೌಂಡೇಷನ್ ಹಾಗೂ ಬ್ರೀಥ್ ಬ್ಲೂ ಸಂಸ್ಥೆಗಳು ತಿಳಿಸಿವೆ.
ಶ್ವಾಸಕೋಶದ ಸಾಮರ್ಥ್ಯ ಕಡಿಮೆ: ಉಸಿರಾಡಲು ಅನ್ನ ನೀರಿಗಿಂತ ಮುಖ್ಯವಾದದ್ದು ಗಾಳಿ. ಗಾಳಿಯನ್ನು ಒಳಗೆಳೆದುಕೊಳ್ಳಲು ಹಾಗೂ ಹೊರಹಾಕಲು ಅವರವರ ದೇಹಕ್ಕನುಗುಣವಾಗಿ ಶ್ವಾಸಕೋಶದ ಸಾಮರ್ಥ್ಯವಿರುತ್ತದೆ. ವಾಹನಗಳ ಹೊಗೆಯಿಂದ ಹೊರಬರುವ ಕಣ್ಣಿಗೆ ಕಾಣಿಸದ ವಿಷಾಂಶಗಳು ಶ್ವಾಸಕೋಶದ ಒಳ ಸೇರಿಕೊಳ್ಳುತ್ತವೆ. ಹಾನಿಕಾರಕವಾದ ಈ ಅಂಶಗಳನ್ನು ದೇಹದ ಪ್ರತಿರೋಧಕ ವ್ಯವಸ್ಥೆ ಹೊರಹಾಕಲು ವಿಫಲವಾಗುತ್ತವೆ. ಕಾಲಕ್ರಮೇಣ ಇಂಥ ಅಂಶಗಳು ಶ್ವಾಸಕೋಶದಲ್ಲಿ ಶೇಖರಣೆಯಾಗಿ ಅದು ಒಳಗಿಟ್ಟುಕೊಳ್ಳಬಹುದಾದ ಗಾಳಿಯ ಪ್ರಮಾಣದಲ್ಲಿ ಕುಸಿತವಾಗುತ್ತದೆ. ಮುಖ್ಯವಾಗಿ ದೇಹ ಬೆಳವಣಿಗೆ ಹೊಂದುವ 8-14 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ತಲೆದೋರುತ್ತವೆ ಎಂದು ರೋಗನಿರೋಧಕ ತಜ್ಞರಾದ
ಡಾ. ಕೋಮಲಾ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಶೇ.35 ಮಕ್ಕಳಲ್ಲಿ ಸಮಸ್ಯೆ: 4 ಮಹಾನಗರಗಳಲ್ಲಿ ಶಾಲೆ, ಪ್ರಮುಖ ಟ್ರಾಫಿಕ್ ಸಿಗ್ನಲ್ಗಳಲ್ಲಿ ಜನವರಿಯಿಂದ
ಏ. 15ರವರೆಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 503, ಕೋಲ್ಕತದಲ್ಲಿ 562, ಮುಂಬೈನಲ್ಲಿ 573 ಹಾಗೂ ದೆಹಲಿಯಲ್ಲಿ 735 ಮಕ್ಕಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ದೇಶಾದ್ಯಂತ ಅಂಕಿ ಅಂಶಗಳಲ್ಲಿ ಶೇ.35 ಮಕ್ಕಳ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇ.36 ಇದೆ. ಬೆಂಗಳೂರಿನಲ್ಲಿ ಎಸಿ ಕಾರು, ಎಸಿ ಬಸ್ ಸೇರಿ ಇತರ ಮುಚ್ಚಿದ ವಾಹನಗಳಲ್ಲಿ ತೆರಳುವ ಶೇ.82 ಮಕ್ಕಳ ಶ್ವಾಸಕೋಶ ಅತ್ಯುತ್ತಮ ಸ್ಥಿತಿಯಲ್ಲಿದ್ದು, ಶೇ.14 ಮಕ್ಕಳಲ್ಲಿ ಮಾತ್ರ ತೊಂದರೆಯಿದೆ ಎಂದು ಹೀಲ್ ಫೌಂಡೇಷನ್ ಅಧ್ಯಕ್ಷ ಆರ್. ಶಂಕರ್ ಹೇಳಿದ್ದಾರೆ.
ಸರ್ಕಾರಿ ಬಸ್ಗಳಲ್ಲೇ ಹೆಚ್ಚು ಮಾಲಿನ್ಯ: ವಾಯು ಮಾಲಿನ್ಯ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಡಾ.ವಾಮನ ಆಚಾರ್ಯ, ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ಎಲ್ಲ ಸರ್ಕಾರಿ ಸಾರಿಗೆ ಸಂಸ್ಥೆಗಳ ವಾಹನಗಳೂ ಪ್ರತಿ ತಿಂಗಳೂ ಕಡ್ಡಾಯವಾಗಿ ವಾಯುಮಾಲಿನ್ಯ ತಪಾಸಣೆ(ಪಿಯುಸಿ) ನಡೆಸುವಂತೆ ನಿರ್ದೇಶಿಸಲಾಗಿತ್ತು. ಆದರೆ ಹಲವು ಕಡೆ ತಪಾಸಣೆ ಯಂತ್ರ ಕಾರ್ಯನಿರ್ವಹಿಸುತ್ತಿರಲಿಲ್ಲ. ಬಸ್ಗಳ ಜತೆಗೆ 15 ವರ್ಷಕ್ಕಿಂತ ಹೆಚ್ಚಿನ ಅವಧಿಯ ವಾಹನಗಳು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ್ದು ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳ ಕರ್ತವ್ಯ ಎಂದು ಹೇಳಿದ್ದಾರೆ.
ಪರಿಹಾರ ಏನು?
ಹೊಸ ವಾಹನ ನೋಂದಣಿಗೆ ಬ್ರೇಕ್ 15 ವರ್ಷ ಮೀರಿದ ವಾಹನಗಳ ನಿಷೇಧ 6 ತಿಂಗಳಿಗೊಮ್ಮೆ ವಾಯುಮಾಲಿನ್ಯ ತಪಾಸಣೆ ಕಡ್ಡಾಯ ವಾಯು ಮಾಲಿನ್ಯ ಪ್ರಮಾಣಪತ್ರ ಪರಿಶೀಲನೆಗೆ ಪ್ರತ್ಯೇಕ ಸಂಸ್ಥೆ.