ಬೆಂಗಳೂರು: ಏಷ್ಯಾದಲ್ಲೇ ಮೊದಲ ಬಾರಿಗೆ ಆನೆಗಳ ನಿರ್ದಿಷ್ಟ ಸಂಖ್ಯೆ ಪತ್ತೆ ಹಚ್ಚುವ ಸಲುವಾಗಿ ವೈಜ್ಞಾನಿಕ ವಿಧಾನವಾದ ಆನೆ ಲದ್ದಿ ಅಧ್ಯಯನ ವನ್ನು ರಾಜ್ಯದ ರಾಷ್ಟ್ರೀಯ ಉದ್ಯಾನಗಳಲ್ಲಿ ಅರಣ್ಯ ಇಲಾಖೆ ಆರಂಭಿಸಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಆನೆಗಳ ನಿರ್ದಿಷ್ಟ ಸಂಖ್ಯೆ ತಿಳಿಯುವುದು ನೇರ ಗಣತಿಯಿಂದ ಕಷ್ಟ. ಹೀಗಾಗಿ, ವೈಜ್ಞಾನಿಕ ವಿಧಾನದ ಮೂಲಕ ಲದ್ದಿ ಅಧ್ಯಯನ ಕೈಗೊಳ್ಳಲಾಗಿದೆ. ಗಣತಿ ಕಾರ್ಯಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಹಭಾಗಿತ್ವವಿದೆ.
ಆನೆಗಳ ಜೀವನಶೈಲಿಯನ್ನು ಹತ್ತಿರದಿಂದ ವೀಕ್ಷಿಸಿದ ಅರಣ್ಯ ಸಿಬ್ಬಂದಿಯಿಂದಲೇ ಅಧ್ಯಯನ ನಡೆಯುತ್ತಿದೆ. ಅಧ್ಯಯನ ಕ್ರಮ ಹೇಗೆ ಎಂಬ ಬಗ್ಗೆ ಐಐಎಸ್ಸಿ ಅವರಿಗೆ ತರಬೇತಿ ನೀಡಿದೆ. ಪ್ರತಿ 3 ವರ್ಷಗಳಿಗೊಮ್ಮೆ ಆನೆಗಣತಿ ನಡೆಯುತ್ತದೆ. 2012ರಲ್ಲಿ ನಡೆದಿದ್ದ ಆನೆಗಣತಿ ಪ್ರಕಾರ ನೇರ ಗಣತಿಯಲ್ಲಿ 5,648 ಆನೆಗಳು ಮತ್ತು ಪರೋಕ್ಷ ಗಣತಿಯಲ್ಲಿ 6,521 ಆನೆಗಳು ಪತ್ತೆಯಾಗಿದ್ದವು. ಇವೆರೆಡು ಅಧ್ಯಯನ ಒಟ್ಟುಗೂಡಿಸಿ ರಾಜ್ಯದಲ್ಲಿ 6,072 ಆನೆಗಳಿವೆ ಎಂದು ಅಂದಾಜಿಸಲಾಗಿದೆ ಎನ್ನುತ್ತಾರೆ ವನ್ಯಜೀವಿ ವಿಭಾಗದ ಹೆಚ್ಚುವರಿ ಅರಣ್ಯ ಪ್ರಧಾನ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ.
ನೇರ ಹಾಗೂ ಪರೋಕ್ಷ ಗಣತಿ ಮೂಲಕ ಜಗತ್ತಿನಾದ್ಯಂತ ಆನೆಗಣತಿ ಮಾಡಲಾಗುತ್ತದೆ. ನೇರ ಗಣತಿಯಲ್ಲಿ ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಓಡಾಡಿ ಆನೆಗಳನ್ನು ಹುಡುಕಿ ಗಣತಿ ಮಾಡುತ್ತಾರೆ. ಆನೆಗಳ ಸಂತತಿ ಲೆಕ್ಕ ಹಾಕುವುದು, ಆನೆ ಲದ್ದಿ ಅಧ್ಯಯನದ ಮೂಲಕ ಪರೋಕ್ಷ ಗಣತಿ ಮಾಡಲಾಗುತ್ತದೆ.
ಐಐಎಸ್ಸಿ ತಂತ್ರಗಾರಿಕೆ: ವೈಜ್ಞಾನಿಕ ವಿಧಾನವಾದ ಆನೆ ಲದ್ದಿ ಅಧ್ಯಯನ ವಿಧಾನ ಬಹುದೀರ್ಘವಾದ ಅಧ್ಯಯನವಾಗಿದೆ. ಈ ಅವಧಿಯಲ್ಲಿ ಆನೆಲದ್ದಿ ಗುರ್ತಿಸಿ, ಅದರ ಕೊಳೆಯುವಿಕೆಯ ಮಾಹಿತಿ ಪಡೆದು, ಕೊನೆಯಲ್ಲಿ ಆ ಅಂಶಗಳನ್ನು ಸೂತ್ರದ ಮೂಲಕ ಬೇರ್ಪಡಿಸಿ ನಿರ್ದಿಷ್ಟ ಸಂಖ್ಯೆ ನೀಡಬೇಕಾಗುತ್ತದೆ. ಈ ಎಲ್ಲ ತಂತ್ರಗಾರಿಕೆ ಸಹಕಾರಕ್ಕಾಗಿ ಐಐಎಸ್ಸಿಯನ್ನು ಅರಣ್ಯ ಇಲಾಖೆ ಕೋರಿತ್ತು. 24 ವರ್ಷಗಳಿಂದ ಈ ಸಂಬಂಧ ಅಧ್ಯಯನ ನಡೆಸಿರುವ ಐಐಎಸ್ಸಿಯ ಸಂಶೋಧಕ ಡಾ. ಸುರೇಂದ್ರ ವರ್ವ, ಈ ತಂತ್ರಗಾರಿಕೆ ಹೆಣೆದಿದ್ದಾರೆ. ಆನೆಲದ್ದಿ ಗಣತಿಗೆ ಐಐಎಸ್ಸಿ ತಾಂತ್ರಿಕ ಸಹಾಯ, ಸಲಹೆ ಮತ್ತು ಸೂಚನೆ ನೀಡುತ್ತಿದೆ.
***
ಎಲ್ಲೆಲ್ಲಿ ನಡೆಯುತ್ತಿದೆ?
ರಾಜ್ಯದ ಐದು ರಾಷ್ಟ್ರೀಯ ಉದ್ಯಾನಗಳಾದ ಬನ್ನೇರುಘಟ್ಟ, ನಾಗರಹೊಳೆ, ಬಂಡಿಪುರ, ಬಿಆರ್ಟಿ ಮತ್ತು ಭದ್ರಾ ಅರಣ್ಯಪ್ರದೇಶಗಳಲ್ಲಿ ಆನೆ ಲದ್ದಿ ಅಧ್ಯಯನ ನಡೆಯುತ್ತಿದೆ.
***
ಹೇಗೆ ನಡೆಯುತ್ತೆ ಅಧ್ಯಯನ?
ಒಂದು ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ 20 ದಿನಗಳ ಕಾಲ ಆನೆ ಲದ್ದಿ ಹುಡುಕಾಟ ನಡೆಸುತ್ತಾರೆ. ಹೊಸ ಲದ್ದಿ ಕಂಡ ಕೂಡಲೇ ಅದರ ಸುತ್ತ ಮಾರ್ಕ್ ಮಾಡುತ್ತಾರೆ. ಜಿಪಿಎಸ್ ಸಾಧನದ ಮೂಲಕ ದಾಖಲೆ ಮಾಡಿಕೊಂಡು, ಅದರ ಫೋಟೋ ತೆಗೆದುಕೊಳ್ಳುತ್ತಾರೆ. ಎಷ್ಟು ದಿನಕ್ಕೆ ಅದು ಕೊಳೆಯುತ್ತದೆ ಎಂಬುದು ತಿಳಿಯುತ್ತಾರೆ. ಒಂದು ಆನೆ ದಿನಕ್ಕೆ 20 ಬಾರಿ ಲದ್ದಿ ಹಾಕುತ್ತದೆ. ಒಂದು ಪ್ರದೇಶದಲ್ಲಿ ಎರಡು ದಿನಕ್ಕೆ 40 ಕಡೆ ಲದ್ದಿ ಸಿಕ್ಕರೆ ಅದು 2 ಆನೆ, 60 ಕಡೆ ಲದ್ದಿ ಸಿಕ್ಕರೆ 3 ಆನೆಗಳಿವೆ ಎಂದು ತಿಳಿಯಲಾಗುತ್ತದೆ. ನಂತರ ಎಷ್ಟು ಲದ್ದಿ ಇದೆ, ಎಷ್ಟು ಬಾರಿ ಹಾಕುತ್ತದೆ ಹಾಗೂ ಎಷ್ಟು ದಿನಕ್ಕೆ ಅದು ಗೊಬ್ಬರವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.