ಕರ್ನಾಟಕ

ನಮ್ಮಲ್ಲಿರುವುದು ಬರೀ ಆರು ವನ್ಯಜೀವಿ ವೈದ್ಯರು!

Pinterest LinkedIn Tumblr

vanya-fi– ನಿತ್ಯಾನಂದ ಶಿವಗಂಗೆ

ಶಿವಮೊಗ್ಗ: ವನ್ಯಜೀವಿಗಳು ಊರಿನೊಳಗೆ ಪ್ರವೇಶಿಸಿದರೆ ಅವುಗಳನ್ನು ಸೆರೆಹಿಡಿದು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಬಳಿ ಅಗತ್ಯ ಸಲಕರಣೆಗಳೇ ಇಲ್ಲ. ಅಲ್ಲದೆ ಎಲ್ಲ ವನ್ಯಜೀವಿ ವಿಭಾಗಗಳಲ್ಲಿ ವೈದ್ಯರೂ ಇಲ್ಲ!

ಹೌದು. ಹುಲಿ, ಚಿರತೆ, ಆನೆ ಮತ್ತಿತರ ವನ್ಯಜೀವಿಗಳು ಊರೊಳಗೆ ಪ್ರವೇಶಿಸಿದಾಗ ಅವುಗಳಿಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗುತ್ತದೆ. ಹೀಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಹಾಗೂ ವನ್ಯಜೀವಿಗಳಿಗೆ ತುರ್ತ ಚಿಕಿತ್ಸೆ ಕೊಡಲು ತಜ್ಞರ ಕೊರತೆ ಕಾಡುತ್ತಿದೆ.

ಚಾಮರಾಜನಗರ, ಹುಣಸೂರು, ಬಂಡೀಪುರ, ಶಿವಮೊಗ್ಗ ಸೇರಿ ರಾಜ್ಯದಲ್ಲಿ ಒಟ್ಟು ವನ್ಯಜೀವಿ ತಜ್ಞ ವೈದ್ಯರಿದ್ದಾರೆ. ಕೆಲವೆಡೆ ನಿಯೋಜನೆ ಮೇಲೆ ಪಶುಸಂಗೋಪನಾ ಇಲಾಖೆ ವೈದ್ಯರ ನೆರವು ಪಡೆಯಲಾಗುತ್ತಿದೆ. ಹೀಗಾಗಿ ಯಾವುದೇ ಜಿಲ್ಲೆಯಲ್ಲಿ ವನ್ಯಜೀವಿಗಳು ಊರೊಳಗೆ ಬಂದರೂ ಈ ಆರು ವನ್ಯಜೀವಿ ತಜ್ಞರಲ್ಲೇ ಯಾರಾದರೊಬ್ಬ ತೆರಳಬೇಕಿದೆ.

ತಮ್ಮ ವೃತ್ತದಿಂದ ಬೇರೆಡೆಗೆ ವೈದ್ಯರು ವನ್ಯಜೀವಿಗಳನ್ನು ಹಿಡಿಯಲು ಹೋದಾಗ ಅವರ ವೃತ್ತದಲ್ಲಿ ಯಾವುದೇ ವನ್ಯಜೀವಿಗೆ ತುರ್ತ ಚಿಕಿತ್ಸೆ ಅಗತ್ಯವಿದ್ದರೆ ವೈದ್ಯರ ಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗುತ್ತದೆ.

ಹೋದ ಕೆಲಸ ಮಾಡದೇ, ವಾಪಸ್ ಬರಲೂ ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕುತ್ತಾರೆ. ತಮ್ಮ ವೃತ್ತದಲ್ಲಿ ವನ್ಯಜೀವಿಗೆ ಯಾವುದೇ ತೊಂದರೆ ಯಾದರೂ ಅದರ ಹೊಣೆ

ಯನ್ನು ಈ ವೈದ್ಯರೇ ಹೊತ್ತುಕೊಳ್ಳ ಬೇಕಾ ಗುತ್ತದೆ.

ಚಿಕ್ಕಮಗಳೂರಿನಲ್ಲಿ ಗುರುವಾರ ಚಿರತೆ ಯೊಂದು ಶಾಲೆ ಕೊಠಡಿಯೊಳಗೆ ನುಗ್ಗಿದಾಗ ಅದನ್ನು ಸೆರೆಹಿಡಿಯಲು ಶಿವಮೊಗ್ಗದಿಂದ ವನ್ಯಜೀವಿ ವೈದ್ಯರನ್ನು ಕಳಿಸಲಾಯಿತು. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ವೈದ್ಯರು ತೆರಳಲು ಕನಿಷ್ಠ ಮೂರು ತಾಸು ಬೇಕು. ಆ ಅವಧಿಯಲ್ಲಿ ಚಿರತೆ ಕೊಠಡಿಯೊಳಗೆ ಇದ್ದಿದ್ದರಿಂದ ಬಚಾವ್. ಅದೇ ಹೊರಗಿದ್ದಿದ್ದರೆ ಆಗುತ್ತಿದ್ದ ಅನಾಹುತ ಊಹಿಸಲಸಾಧ್ಯ.

ಪಶು ವೈದ್ಯರನ್ನೇ ಪಳಗಿಸಿ: ಪ್ರತಿ ವಿಭಾಗಕ್ಕೂ ಒಬ್ಬ ವನ್ಯಜೀವಿ ತಜ್ಞ ವೈದ್ಯರನ್ನು ನೇಮಿಸಲು ಸಾಧ್ಯವಾಗದಿದ್ದರೆ ಪಶುಸಂಗೋಪನಾ ಇಲಾಖೆ ವೈದ್ಯರೊಬ್ಬರಿಗೆ ಪ್ರತಿ ವಿಭಾಗದಲ್ಲಿ ತರಬೇತಿ ನೀಡಬೇಕು. ಜತೆಗೆ ಪ್ರತಿ ವಿಭಾಗದಲ್ಲೂ ವನ್ಯಜೀವಿಗಳಿಗೆ ಅರಿವಳಿಕೆ ಮದ್ದು ನೀಡಲು ಡಾಟಿಂಗ್ ಗನ್ ಹಾಗೂ ಅಗತ್ಯ ಔಷಧ ದಾಸ್ತಾನಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಪ್ರಸ್ತುತ ಪಶು ವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಅಗತ್ಯ ತರಬೇತಿ ನೀಡಿದರೆ ವನ್ಯಜೀವಿಗಳಿಗೆ ಚಿಕಿತ್ಸೆಯೊಂದಿಗೆ ತುರ್ತ ಸಂದರ್ಭದಲ್ಲಿ ಅವುಗಳನ್ನು ಹಿಡಿಯಲಿಕ್ಕೆ, ಅರಿವಳಿಕೆ ಮದ್ದು ನೀಡಲಿಕ್ಕೂ ಸಹಾಯವಾಗುತ್ತದೆ. ಇದಕ್ಕಾಗಿ ನೂರಾರು ಕಿಮೀ ದೂರದಿಂದ ವನ್ಯಜೀವಿ ತಜ್ಞರು ಬರುವುದು ತಪ್ಪುತ್ತದೆ. ಇನ್ನಾದರೂ ಸರ್ಕಾರ ಕಣ್ತೆರೆಯುವುದೇ ಎಂಬುದನ್ನು ಕಾದುನೋಡಬೇಕು.

***

ಶಿವಮೊಗ್ಗಕ್ಕೆ ಕಾಯಂ ವನ್ಯಜೀವಿ ತಜ್ಞ ವೈದ್ಯರು ನೇಮಕವಾದ್ದರಿಂದ ಹಾಗೂ ಇಲ್ಲಿ ಡಾಟಿಂಗ್ ಗನ್ ಇದ್ದಿದ್ದರಿಂದ ಚಿಕ್ಕಮಗಳೂರಿನ ಚಿರತೆಯನ್ನು ಬೇಗ ಸೆರೆಹಿಡಿಯಲು ಸಾಧ್ಯವಾಯಿತು. ಇಲ್ಲದಿದ್ದರೆ ದೂರದ ವಿಭಾಗದಿಂದ ವೈದ್ಯರನ್ನು ಕರೆಸಬೇಕಾಗುತ್ತಿತ್ತು.

| ಬಸವರಾಜಯ್ಯ

ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್​ಒ

Write A Comment