ಶಿವಮೊಗ್ಗ, ಆ.16-ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಇಂದು ಸಹ ಸಾಲಬಾಧೆ ಹಾಗೂ ಬೆಳೆನಷ್ಟದಿಂದ ಬೇಸತ್ತ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಚಿಕ್ಕಬಳ್ಳಾಪುರ ವರದಿ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿಡ್ಲಘಟ್ಟ ತಾಲೂಕು ಕೇಶವಪುರದ ರೈತ ಅಂಬರೀಶ್ (30) ಮೃತ ವ್ಯಕ್ತಿ.
ಹಂದಿಗನಾಳ ಗ್ರಾಮದ ಮಾರಯ್ಯಸ್ವಾಮಿಯವರ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತಿದ್ದ ಈತ ಬೆಳೆಗಾಗಿ ಮೂರು ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶಿವಮೊಗ್ಗ ವರದಿ: ಸೊರಬ ತಾಲೂಕಿನ ದುಗ್ಲಿ ಹೊಸೂರು ಗ್ರಾಮದ ನಿವಾಸಿ ರವಿ (34)ಎಂಬ ರೈತ ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ಬೇಸತ್ತು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತನ್ನ 3ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ಬ್ಯಾಂಕ್‌ನಿಂದ 1ಲಕ್ಷ ರೂ. ಹಾಗೂ ಸ್ಥಳೀಯರಿಂದ ಲಕ್ಷಾಂತರ ರೂಪಾಯಿ ಕೈಸಾಲ ಮಾಡಿಕೊಂಡಿದ್ದ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಸರಿಯಾಗಿ ಕೈಸೇರದೆ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕಿನ ಗೇರ್ಬೀಸ್ ಗ್ರಾಮದ ನಿವಾಸಿ ರಾಮಪ್ಪ (50)ಎಂಬ ರೈತ ಸಾಲಬಾಧೆ ಹಾಗೂ ಬೆಳೆನಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈತ ತನ್ನ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಸ್ಥಳೀಯರಿಂದ 2ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದ. ಮುಂಗಾರು ಮಳೆ ದುರ್ಬಲವಾದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಒಣಗಿಹೋಗಿದ್ದರಿಂದ ಸಾಲತೀರಿಸಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.