ಬೆಂಗಳೂರು, ಆ.22: ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ನ ಮಧ್ಯೆ ತೀವ್ರ ಪ್ರತಿಷ್ಠೆ, ಪೈಪೋಟಿ ಸೃಷ್ಟಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಇಂದು (ಆ.22) ನಡೆಯಲಿದ್ದು, 1,121 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.
ಬಿಬಿಎಂಪಿಯ 197 ವಾರ್ಡ್ ಗಳಿಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಆಯೋಗ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿ ಸಲಾಗಿದೆ. ಮತದಾನಕ್ಕೆ ಒಟ್ಟು 6,759 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 1,700 ಅತಿ ಸೂಕ್ಷ್ಮ, 1,991 ಸೂಕ್ಷ್ಮ, 2,863 ಸಾಮಾನ್ಯ ಮತ ಗಟ್ಟೆಗಳನ್ನು ಗುರುತಿಸ ಲಾಗಿದೆ. ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ವಾರ್ಡ್ ಸಂಖ್ಯೆ-25 ಹೊರಮಾವು ಅತಿಹೆಚ್ಚು (85,459) ಮತದಾರರಿರುವ ವಾರ್ಡ್.
ವಾ.ಸಂ.-93 ವಸಂತನಗರ 20,209 ಅತಿಕಡಿಮೆ ಮತದಾರರಿರುವ ವಾರ್ಡ್ಗಳಾಗಿ ಗಮನ ಸೆಳೆದಿವೆ.
ಚುನಾವಣಾ ಸಿಬ್ಬಂದಿ ಆ.21ರ ರಾತ್ರಿಯೇ ಮತಯಂತ್ರ ದೊಂದಿಗೆ ಆಯಾ ಮತಗಟ್ಟೆಗೆ ತೆರಳಿದ್ದು, ಶನಿವಾರ (ಆ.22) ಬೆಳಗ್ಗೆ ಸುಸೂತ್ರ ಮತದಾನಕ್ಕೆ ಸಿದ್ಧತೆ ಕೈಗೊಳ್ಳಲಿದ್ದಾರೆ. ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಎಡಗೈ ಹೆಬ್ಬೆರಳಿಗೆ ಶಾಯಿ
ಮತದಾರರಿಗೆ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದ್ದು, ಮತದಾರರ ಗುರುತಿನ ಚೀಟಿ ಅಥವಾ ಆಯೋಗ ನಿಗದಿಪಡಿಸಿರುವ 22 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು ಎಂದು ಸೂಚಿಸಲಾಗಿದೆ.
ಬಿಗಿ ಬಂದೋಬಸ್ತ್
ತೀವ್ರ ಪೈಪೋಟಿ ಸೃಷ್ಟಿಸಿರುವ ಬಿಬಿಎಂಪಿ ಚುನಾವಣಾ ಭದ್ರತೆಗೆ 7 ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿ, 121 ಕೆಎಸ್ಆರ್ಪಿ ತುಕಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 20 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
38 ಲಕ್ಷಕ್ಕೂ ಅಧಿಕ ಪುರುಷರು ಹಾಗೂ 35 ಲಕ್ಷಕ್ಕೂ ಅಧಿಕ ಮಹಿಳಾ ಮತದಾರರು ಸೇರಿ ಒಟ್ಟು 73 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಅಖಾಡ ದಲ್ಲಿರುವ ಒಟ್ಟು 1,121 ಅಭ್ಯರ್ಥಿಗಳ ಭವಿಷ್ಯವನ್ನು ತೀರ್ಮಾನಿಸಲಿದ್ದಾರೆ.