ಹಾಸನ, ಆ.27: ರಾಜ್ಯ ಸರಕಾರ ಜಾರಿಗೊಳಿಸಲಾಗಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಯೋಜನೆಯು ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ 7 ಮಾರಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಗಾಗಿ 92 ಕೋಟಿ ರೂ.ಅನುದಾನ ಕಾಯ್ದಿರಿಸಿದ್ದು, ಇದು ಸರಕಾರಿ ನೌಕರರಿಗೆ ವರದಾನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಲೋಕೋಪಯೋಗಿ ಖಾತೆ ಸಚಿವಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಹಾಸನ ಶಾಖೆಯಿಂದ ಹಮ್ಮಿಕೊಳ್ಳಲಾದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ 2000ನೆ ಸಾಲಿನ ಆರೋಗ್ಯ ಕಾಯ್ದೆಯನ್ವಯ ಭಾರತದ ಎಲ್ಲ ಜನರಿಗೆ ಆರೋಗ್ಯ ಭಾಗ್ಯವನ್ನು ಕಲ್ಪಿಸುವುದು ರಾಜ್ಯ ಹಾಗೂ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಸರಕಾರಿ ನೌಕರರಿಗೆ ಬರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಈ ಮಧ್ಯೆ ಮಾರಕ ರೋಗಗಳಿಗೆ ತುತ್ತಾದವರು ಹೆಚ್ಚಿನ ಹಣವನ್ನು ವ್ಯಯಮಾಡಿದಾಗ ನೌಕರರ ಕುಟುಂಬ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯವನ್ನು ಜಾರಿಗೊಳಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ನೌಕರರು ಕೂಡ ಒಂದು ಆಧಾರ ಸ್ತಂಭವಾಗಿದು,್ದ ಅವರು ತಮ್ಮ ಜವಾಬ್ದಾರಿಗಳನ್ನು ಅರಿತು ಸರಕಾರ ಜಾರಿಗೊಳಿಸುವ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರಕಾರದೊಂದಿಗೆ ಸಹಕರಿಸಿ ಮಳೆ,ಬೆಳೆ ವೈಫಲ್ಯದಿಂದ ಕಂಗಾಲಾಗಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ಅವರ ನೆರವಿಗಾಗಿ ಸದಾ ಶ್ರಮಿಸಬೇಕೆಂದು ಅವರು ತಿಳಿಸಿದರು.
ಇಂದಿನ ಮಕ್ಕಳು ಭವಿಷ್ಯದಲ್ಲಿ ದೇಶದ ರೂವಾರಿಗಳಾಗಿರುವುದರಿಂದ ಅವರಿಗೆ ಉತ್ತಮ ಸೌಲ್ಯಗಳನ್ನು ಕಲ್ಪಿಸಿದಾಗ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಂತಹ ಮಹಾನ್ ವ್ಯಕ್ತಿಗಳು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಸರಕಾರಿ ನೌಕರರು ಸರಿಯಾಗಿ ತಮ್ಮ ಕಾರ್ಯನಿರ್ವಹಿಸಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ. ಸರಕಾರಿ ನೌಕರರ ಎಲ್ಲ ಬೇಡಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಗಣಿಸಲು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ ಮಾತನಾಡಿ, ಸರಕಾರಿ ನೌಕರರು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಗಳಾಗಿ ಜನ ಸಾಮಾನ್ಯರ ಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಸಮಾರಂಭದಲ್ಲಿ 2013-14 ಮತ್ತು 2014-15 ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆೆಯಾದ ಸರಕಾರಿ ನೌಕರರ ಮಕ್ಕಳನ್ನು ,ಶೇ. 100 ಫಲಿತಾಂಶಕ್ಕೆ ಶ್ರಮಿಸಿದ ಸರಕಾರಿ ಶಾಲೆ ಮುಖ್ಯಸ್ಥರನ್ನು ಹಾಗೂ ಕೇಂದ್ರ ಸಂಘ ಹಾಗೂ ವಿವಿಧ ಜಿಲ್ಲೆಯಿಂದ ಆಗಮಿಸಿದ ನೌಕರರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ರಾಜ್ಯ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಯೋಜನೆ ಮುಖ್ಯಸ್ಥ ಡಾ.ಬೋರೇಗೌಡ,ಆದಿಚುಂಚನಗಿರಿ ಹಾಸನ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ ,ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಾಟೀಲ್ ಪಾಂಡು, ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎಸ್.ಎಂ.ಆನಂದ್, ಕೈಗಾರಿಕಾ ನಿಗಮದ ಅಧ್ಯಕ್ಷ ಸಿ.ವಿ.ರಾಜಪ್ಪ, ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸುಗಲ್, ಶಾಸಕ ವೈ.ಎನ್.ರುದ್ರೇಶಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ರಶ್ಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ, ನಗರಸಭೆೆ ಅಧಕ್ಷೆ ವಿದ್ಯಾ ಆನಂದ್, ಮತ್ತಿತರರು ಉಪಸ್ಥಿತರಿದ್ದರು.