ಕರ್ನಾಟಕ

ರಫ್ತು ಉತ್ತೇಜನಾ ಅಭಿವೃದ್ಧಿ ಚಟುವಟಿಕೆಗಳ ಕಾರ್ಯಾಗಾರ: ಅಭಿವೃದ್ಧಿ ಪರ ವೃತ್ತಿಯಲ್ಲಿ ತೊಡಗಿ: ಡಿಸಿ ವೆಂಕಟೇಶ್ ಕರೆ

Pinterest LinkedIn Tumblr

4dcಚಿಕ್ಕಬಳ್ಳಾಪುರ, ಆ.27: ಯುವಜನತೆ ಸರಕಾರಿ ಕೆಲಸದ ವ್ಯಾಮೋಹ ತೊರೆದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿರುವ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ಆಶ್ರಯದಲ್ಲಿ ಕೈಗಾರಿಕಾ ನೀತಿಯನ್ವಯ ರಪ್ತು ಉತ್ತೇಜನಾ ಅಭಿವೃದ್ಧಿ ಚಟುವಟಿಕೆಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳು ದೇಶದ ಆರ್ಥಿಕ ಸುಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಯುವ ಜನತೆ ಉದ್ಯಮಶೀಲತೆ ಬೆಳೆಸಿಕೊಳ್ಳುವ ಮೂಲಕ ಉದ್ಯೋಗದಾತರಾಗಬೇಕೆಂದು ತಿಳಿಸಿದರು.
ನಂಜುಂಡಪ್ಪ ವರದಿಯಂತೆ ಜಿಲ್ಲೆಯ ಎಲ್ಲ ತಾಲೂಕುಗಳು ತೀರಾ ಹಿಂದುಳಿದಿದೆ. ಆದರೂ ಕೈಗಾರಿಕೆಗಳಿಗೆ ಪ್ರತಿಕೂಲ ವಾತಾವರಣವಿದ್ದು, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ವಿಶ್ವದ ಅತ್ಯುತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡಲಾಗುತ್ತಿದೆ ಹಾಗೂ ಜಿಲ್ಲೆಯಲ್ಲಿ ದ್ರಾಕ್ಷಿ, ಟೊಮೆಟೊ, ಆಲೂಗಡ್ಡೆ ಸೇರಿದಂತೆ ಇತರೆ ಬೆಳೆಗಳನ್ನು ಯತ್ತೇಚ್ಛವಾಗಿ ಬೆಳೆಯಲಾಗುತ್ತಿದ್ದು, ರೇಷ್ಮೆ ಹಾಗೂ ಕೃಷಿ ಆಧಾರಿತ ಉತ್ಪನ್ನಗಳ ಕೈಗಾರಿಕೆಗಳ ಸ್ಥಾಪನೆಗೆ ಮೊದಲ ಆದ್ಯತೆ ನೀಡಬೇಕೆಂದರು.
ರೈತರು ಸಹ ತಮ್ಮನ್ನು ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದ್ದು, ಉತ್ತಮ ಆಲೋಚನೆಯೊಂದಿಗೆ ಇರುವ ಸವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಲ್ಲಿ ಪ್ರತಿಯೊಬ್ಬರೂ ಉದ್ದಿಮೆಯಲ್ಲಿ ಅಭಿವೃದ್ಧಿ ಸಾಧಿಸಬಹುದು. ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ಯುವ ಉದ್ಯಮಿಗಳಿಗೆ ಜಿಲ್ಲಾಡಳಿತದ ಸಹಾಕಾರಿ ನೀಡಲಿದೆ ಎಂದು ವೆಂಕಟೇಶ್ ಭರವಸೆ ನೀಡಿದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ಅಧಿಕಾರಿ ಮುಹಮ್ಮದ್ ಶರೀಫ್ ಮಾತನಾಡಿ, ರಫ್ತಿನ ಕುರಿತು ಯುವ ಉದ್ದಿಮೆದಾರರಲ್ಲಿ ಇರುವ ಗೊಂದಲ, ತೊಡಕುಗಳನ್ನು ನಿವಾರಿಸಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಲ್ಲದೆ ಯುವ ಉದ್ದಿಮೆದಾರರಿಗೆ ಎಲ್ಲಾ ರೀತಿಯ ಉತ್ತೇಜನ ನೀಡಲಾಗುತ್ತಿದೆ ಎಂದರು.
ಇತ್ತೀಚೆಗೆ ರಫ್ತ್ತು ಕೇವಲ ದೊಡ್ಡ ಕೈಗಾರಿಕೆಗಳು ಮಾತ್ರವಲ್ಲದೆ ಸ್ಥಳೀಯ ವ್ಯಾಪಾರದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಜಗತ್ತಿನಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯಿದ್ದು, ಸಾರಿಗೆ ವೆಚ್ಚವನ್ನು ಕಡಿತಗೊಳಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಯುವ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು 11 ನಾನಾ ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಸದ್ಬಳಕೆ ಮಾಡಿಕೊಂಡು ಯುವ ಉದ್ದಿಮೆದಾರರು ಆರ್ಥಿಕ ಸ್ಥಿತಿಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.
ಸರ್.ಎಂ.ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಲ್. ಶ್ರೀನಿವಾಸಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಪಾವಟೆ, ಕೆ.ಎಸ್.ಎಫ್.ಸಿ. ವ್ಯವಸ್ಥಾಪಕ ಎಸ್.ಎಸ್. ಪರಪ್ಪನವರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಎಚ್. ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment