ಕನಕಪುರ,ಆ.28: ಉತ್ಪಾದಿಸುತ್ತಿರುವ ಹಾಲಿನಲ್ಲಿ ಜಿಡ್ಡಿನ ಅಂಶ ಕಡಿಮೆಯಿದೆ ಎಂಬ ನೆಪವೊಡ್ಡಿ ಬೆಂಗಳೂರು ಹಾಲು ಒಕ್ಕೂಟವು ರೈತರ ಹಾಲನ್ನು ತಿರಸ್ಕರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ರಸ್ತೆಗಿಳಿದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಪಟ್ಟಣದ ರಾಮನಗರ ರಸ್ತೆ ಗಣೇಶ ದೇವಸ್ಥಾನದ ಹಾಲಿನ ಡೈರಿಯ ಮುಂದೆ ಜಮಾವಣೆಗೊಂಡ ರೈತರು ಹಾಲನ್ನು ತಿರಸ್ಕರಿಸುತ್ತಿದ್ದುದನ್ನು ವಿರೋಧಿಸಿ ಬೆಂಗಳೂರು ಡೈರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಕಳೆದ ಹತ್ತು-ಹದಿನೈದು ದಿನಗಳಿಂದ ಬೆಂಗಳೂರು ಡೈರಿ ರೈತರ ಹಾಲನ್ನು ಖರೀದಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಜಿಡ್ಡಿನ ನೆಪವೊಡ್ಡಿ ರೈತರ ಹಾಲನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಬೇಸತ್ತ ರೈತರು ಹಾಲನ್ನು ಚರಂಡಿಗೆ ಚೆಲ್ಲುವಂತಾಗಿದೆ ಎಂದು ಆರೋಪಿಸಿದರು.
ತಾಲೂಕಿನ ಬಸವನ ಬನ್ನಿಕುಪ್ಪೆ ಗ್ರಾಮದಲ್ಲಿ ಇದೇ ರೀತಿ ಹಾಲು ಉತ್ಪಾದಕರ ಸಂಘ ರೈರ ಹಾಲನ್ನು ತಿರಸ್ಕರಿಸಿ ಗುಣಮಟ್ಟ ಪರೀಕ್ಷೆಗಾಗಿ ಕನಕಪುರ ಶೀತಲ ಕೇಂದ್ರಕ್ಕೆ ಕಳುಹಿಸಿ ಅಲೆದಾಡಿ ಸುತ್ತಿದ್ದಾರೆ. ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ರೈತರು ನೋವನ್ನು ಅನುಭವಿಸುವಂತಾಗಿದೆ ಎಂದು ಸ್ಥಳದಲ್ಲಿಯೇ ಇದ್ದ ಉಪ ವ್ಯವಸ್ಥಾಪಕ ಜವರಪ್ಪರ ವಿರುದ್ಧ ವಾಗ್ದಾಳಿ ನಡೆಸಲಾಯಿತು.
ಡೈರಿಯಲ್ಲಿ ಯಾರೋ ಒಂದಿಬ್ಬರು ರೈತರು ಹಾಲಿಗೆ ಯೂರಿಯ ಮತ್ತು ಸಕ್ಕರೆಯನ್ನು ಬೆರೆಸಿ ಡಿಗ್ರಿ ಬರುವಂತೆ ಮಾಡುವ ತಪ್ಪಿಗೆ ಎಲ್ಲಾ ರೈತರಿಗೂ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದರು.
ಕೆಲ ಭಾಗದಲ್ಲಿ ರೈತರು ಶೇ.3.1ರಷ್ಟು ಜಿಡ್ಡಿನಂಶವಿದ್ದರೆ ಒಕ್ಕೂಟ 3.5 ರಷ್ಟು ಜಿಡ್ಡಿನ ಅಂಶ ಬೇಕು ಎಂದು ಹೇಳುತ್ತದೆ. ಕೆಲವೆಡೆ 3.8ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜಿಡ್ಡಿನ ಅಂಶ ಬಂದರೂ ಹಾಲನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ರೈತ ರೇಷ್ಮೆ ಬೆಳೆಯಿಂದ ಕಂಗೆಟ್ಟು ಬೆಲೆಯಿಲ್ಲದೆ ಹಾಗೂ ಕಬ್ಬು ಬೆಳೆದ ರೈತ ಕಬ್ಬಿಗೂ ಬೆಂಬಲ ಬೆಲೆ ಇಲ್ಲದೆ ಬೆಂಕಿ ಹಚ್ಚಿಕೊಂಡು ಸಾಯುವುದರ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ. ಈಗ ಮತ್ತೆ ಹೈನುಗಾರಿಕೆ ನಂಬಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದರು.
ರಾಮನಗರ, ಮಾಗಡಿ, ಚನ್ನಪಟ್ಟಣ, ಹೊಸಕೋಟೆ ಈ ಭಾಗದಲ್ಲಿ ಇಂತಹ ಸಮಸ್ಯೆ ಇಲ್ಲದಿದ್ದರೂ ಕನಕಪುರ ತಾಲೂಕಿನಲ್ಲಿ ಮಾತ್ರ ಹಾಲು ಒಕ್ಕೂಟವು ರೈತರಿಗೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸಂಬಂಧಪಟ್ಟ ಡೈರಿಯ ನಿರ್ದೇಶಕರು, ಕಣ್ಮುಚ್ಚಿ ಕುಳಿತಿರುವುದರಿಂದ ರೈತರ ಅವಸ್ಥೆ ಕಂಗಾಲಾಗಿದೆ ಎಂದರು.
ಶೀತಲ ಕೇಂದ್ರದಲ್ಲಿ ದಿನಕ್ಕೆ ಲಕ್ಷಾಂತರ ರೂ. ಅವ್ಯವಹಾರ ನಡೆಯುತ್ತಿದೆ. ಅದನ್ನೆಲ್ಲಾ ತಡೆಯೊಡ್ಡುವುದನ್ನು ಬಿಟ್ಟು ಹಸುಗಳನ್ನು ಸಾಕಿ ಸಣ್ಣಪುಟ್ಟ ಜೀವನ ಮಾಡುವ ರೈತರಿಗೆ ಬರೆ ಹಾಕಲು ಹೊರಟಿದ್ದಾರೆ. ಸರಕಾರ ಈ ಬಗ್ಗೆ ಗಮನಹರಿಸಿ ನ್ಯಾಯ ದೊರಕಿಸದಿದ್ದರೆ ಹೈನುಗಾರಿಕೆಯನ್ನು ನಂಬಿರುವ ರೈತರೂ ಕೂಡ ಆತ್ಮಹತ್ಯೆಗೆ ಮುಂದಾಗುವುದಾಗಿ ಎಚ್ಚರಿಸಿದರು.