ಕರ್ನಾಟಕ

ಅಬ್ಬರದ ಮಳೆ: ಶೆಡ್‌ಗಳ ಮೇಲೆ ಕುಸಿದು ಬಿದ್ದ ತಡೆಗೋಡೆ; ಮೂವರ ದುರ್ಮರಣ

Pinterest LinkedIn Tumblr

rainಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ, ನಿರ್ಮಾಣ ಹಂತದ ಅಪಾರ್ಟ್‌ವೊಂದರ ತಡೆಗೋಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಹೆಗಡೆನಗರ ಸಮೀಪದ ನೂರ್‌ ನಗರದಲ್ಲಿ ನಡೆದಿದೆ.

ಜಾರ್ಖಂಡ್‌ನ ಶಂಕರ್ ಮಂಡಲ್ (28), ಪಶ್ಚಿಮ ಬಂಗಾಳದ ದುಲಾಲ್‌ (23) ಹಾಗೂ ಅಜಿತ್ ಪ್ರಧಾನ್ (46) ಮೃತಪಟ್ಟವರು.  ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌.ಆರ್. ಸಿಗ್ನೇಚರ್‌ ಹೆಸರಿನ ಈ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು ಐವತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಲ್ಲದೆ, ಕಟ್ಟಡದ ಸುತ್ತ ನಿರ್ಮಿಸಲಾಗಿದ್ದ ತಡೆಗೋಡಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಸಿಮೆಂಟ್‌ ಶೀಟ್‌ನ ಐದು ಶೆಡ್‌ಗಳಲ್ಲಿ  ಎಲ್ಲರೂ ವಾಸಿಸುತ್ತಿದ್ದರು.

ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿದ್ದಾಗ 9.35ರ ಸುಮಾರಿಗೆ ಸುಮಾರು ಎಂಟು ಅಡಿ ಎತ್ತರದ ತಡೆಗೋಡೆ ಐದೂ ಶೆಡ್‌ಗಳ ಮೇಲೆ ಕುಸಿದು ಬಿದ್ದಿದೆ. ಭಾರಿ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ತಕ್ಷಣ ಪೊಲೀಸ್ ಮತ್ತು ತುರ್ತು ಸೇವಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದರು. ಈ ವೇಳೆ ಸೆಲ್ವಂ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ದುಲಾಲ್‌ ಮತ್ತು ಅಜಿತ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಸಂಪಿಗೇಹಳ್ಳಿ  ಠಾಣೆ ಪೊಲೀಸರು ತಿಳಿಸಿದರು.

ಶಿಥಿಲಗೊಂಡಿದ್ದ ಗೋಡೆ
‘ಶುಕ್ರವಾರ ಸುರಿದ ಮಳೆಯಿಂದಾಗಿ  ತಡೆಗೋಡೆಯ ಸುತ್ತ ನೀರು ಸಂಗ್ರಹಗೊಂಡಿತ್ತು. ಭಾನುವಾರ ರಾತ್ರಿಯೂ ಎರಡೂವರೆ ತಾಸು ಸುರಿದಿದ್ದರಿಂದ, ಗೋಡೆ ಬಹುತೇಕ ಶಿಥಿಲಗೊಂಡಿತ್ತು. ಮಳೆಯ ಜತೆಗೆ ಗಾಳಿಯ ಅಬ್ಬರವೂ ಇದ್ದಿದ್ದರಿಂದ, ಶೆಡ್‌ಗಳ ಮೇಲೆ ತಡೆಗೋಡೆ ಕುಸಿದಿರುವ ಸಾಧ್ಯತೆ ಇದೆ  ಎಂದು ಸ್ಥಳೀಯರೊಬ್ಬರು ಹೇಳಿದರು.

Write A Comment