ಕರ್ನಾಟಕ

ಜನರ ಪಾಲಿಗೆ ಸರ್ಕಾರ ಸತ್ತಿದೆಯೇ?: ಯಡಿಯೂರಪ್ಪ

Pinterest LinkedIn Tumblr

yaddiಬೆಂಗಳೂರು: ‘ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಜನರ ಅಹವಾಲು ಆಲಿಸುತ್ತಿಲ್ಲ. ಜನರ ಪಾಲಿಗೆ ಸರ್ಕಾರ ಸತ್ತಿದೆಯೇ?’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದರು.

ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕಾರ್ಯವೈಖರಿಯನ್ನು  ಟೀಕಿಸಿದರು.
‘ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿ ರಾಜ್ಯಕ್ಕೆ ಅನಿಷ್ಟ ಕಾಡುತ್ತಿದೆ.  ಬರಗಾಲ ಬಂದರೂ, ಸಚಿವರು ಒಂದು ತಿಂಗಳಿನಿಂದ ಬಿಬಿಎಂಪಿ ಗದ್ದುಗೆ ಹಿಡಿಯುವುದರಲ್ಲೇ ಮಗ್ನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಸಚಿವರಾಗಲೀ, ಅಧಿಕಾರಿಗಳಾಗಲೀ   ಬರಪೀಡಿತ ಜಿಲ್ಲೆಗೆ ಭೇಟಿ ನೀಡಿಲ್ಲ. ಕಂದಾಯ ಹಾಗೂ ಕೃಷಿ ಸಚಿವರೂ ಜನರ ಸಂಕಷ್ಟ ವಿಚಾರಿಸಿಲ್ಲ. ನೀರಾವರಿ ಸಚಿವರು  ಎಲ್ಲಿದ್ದಾರೆ ಎಂದೇ ಗೊತ್ತಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಸರ್ಕಾರದ ಮುಖ್ಯ ಕಾರ್ಯದರ್ಶಿ ಇದ್ದಾನೇನು. ರಾಜ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ಮಾಡಿ ವರದಿ ತರಿಸಿಕೊಂಡಿದ್ದಾನೇನೊ?’ ಎಂದು ಏಕವಚನದಲ್ಲೇ ಪ್ರಶ್ನಿಸಿದರು. ‘ಬರದ ಬಗ್ಗೆ ಸರ್ಕಾರ ಇನ್ನೂ ವರದಿಯನ್ನೇ ಸಿದ್ಧಪಡಿಸಿಲ್ಲ.  ಕೇಂದ್ರಕ್ಕೂ ವರದಿ ನೀಡಿಲ್ಲ.   ರಾಜ್ಯಕ್ಕೆ ನೆರವಾಗಲು ಕೇಂದ್ರ ಸಿದ್ಧ. ಆದರೆ, ಅದನ್ನು ಉಪಯೋಗಿಸುವ ಯೋಗ್ಯತೆ, ಪ್ರಾಮಾಣಿಕತೆ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದರು.
‘ಜನರ ಗೋಳು  ಕೇಳುವವರಿಲ್ಲ. ಜನರ ದಯನೀಯ ಪರಿಸ್ಥಿ ತಿ ನೋಡಲು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡಬೇಕು.   ಜನ ಬಡಿಗೆ ತೆಗೆದುಕೊಂಡು  ವಿಧಾನಸೌಧಕ್ಕೆ ಮುತ್ತಿಗೆ ಹಾಕುವವರೆಗೆ ಹೋರಾಟ ಮುಂದುವರಿಯುತ್ತದೆ’ ಎಂದರು.

ವಿಶೇಷ ಅಧಿವೇಶನ ನಡೆಯಲಿ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, ‘ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು. ಲೋಕಾಯುಕ್ತರ ಪದಚ್ಯುತಿ ವಿಚಾರವನ್ನು ಇದರ ಜತೆ ಸೇರಿಸದೆ, ರೈತರ ಸಮಸ್ಯೆ ಚರ್ಚೆಗೆ ಆದ್ಯತೆ ನೀಡಬೇಕು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ಈ ಬಗ್ಗೆ ಸಲಹೆ ನೀಡಿದ್ದಾರೆ’ ಎಂದರು.

‘ಬರ ಪರಿಹಾರಕ್ಕೆ ₨ 571 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಹೇಳಿದೆ. ರಾಜ್ಯ ವಿಕೋಪ ಪರಿಹಾರ ನಿಧಿಗೆ ಕೇಂದ್ರದಿಂದ ಕಳೆದ ವರ್ಷ ₨ 195 ಕೋಟಿ  ಹಾಗೂ ಈ ವರ್ಷ ₨ 276 ಕೋಟಿ ಬಂದಿದೆ. ಕುಡಿಯುವ ನೀರಿಗಾಗಿ ಕೇಂದ್ರದಿಂದ ಬಿಡುಗಡೆಯಾದ ಹಣದಲ್ಲೂ ₨ 400 ಕೋಟಿ ಖರ್ಚಾಗದೆ ಉಳಿದಿದೆ. ಬರಕ್ಕಾಗಿ ರಾಜ್ಯದ ಬೊಕ್ಕಸದಿಂದ ಏನು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದರು.

‘ಸೆಪ್ಟೆಂಬರ್‌ 13ಕ್ಕೆ ಮೊದಲ ಹಂತದ ರೈತ ಚೈತನ್ಯ ಮುಕ್ತಾಯ ಆಗುತ್ತದೆ. ಈ ಸಲುವಾಗಿ ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭಾಗವಹಿಸುತ್ತಾರೆ. ಎರಡನೇ ಹಂತದ ಯಾತ್ರೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದರು.

ರೈತ ಚೈತನ್ಯ ಯಾತ್ರೆಗೆ ಜನರು ಬೆಂಬಲ ಸೂಚಿಸಿದ್ದು, ಸರ್ಕಾರ ವಿರುದ್ಧ  ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ

Write A Comment