ಮೈಸೂರು/ಸಿರುಗುಪ್ಪ: ಮೆಕ್ಕಾದ ಮಸೀದಿಯಲ್ಲಿ ಇದೇ 11ರಂದು ಸಂಭವಿಸಿದ ಕ್ರೇನ್ ದುರಂತದಲ್ಲಿ ಮೃತಪಟ್ಟವರಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಇಬ್ಬರು ಮತ್ತು ಮೈಸೂರಿನ ಒಬ್ಬ ಮಹಿಳೆ ಸೇರಿದ್ದಾರೆ.
ಸಿರುಗುಪ್ಪದ ಓರಗಿತ್ತಿಯರಾದ ಜಿ.ಖಾದರ್‌ಬೀ (45), ಶಮೀನಾಬಾನು (40) ಮೃತಪಟ್ಟಿದ್ದಾರೆ. ಖಾದರ್‌ಬೀ ಪತಿ ಮಹ್ಮದ್ ಯೂನಸ್ ಅವರ ಕೈ ಮುರಿದಿದೆ.
ಖಾಸಗಿ ಏಜೆನ್ಸಿ ಮೂಲಕ ಯಾತ್ರೆಗೆ ತೆರಳಿದ್ದರಿಂದ ದೇಹಗಳನ್ನು ಗುರುತಿಸುವಲ್ಲಿ ವಿಳಂಬವಾಗಿತ್ತು. ಸೋಮವಾರ ಸಂಜೆ ಮೆಕ್ಕಾದಲ್ಲಿಯೇ ಅಂತ್ಯಕ್ರಿಯೆ ಜರುಗಿತು ಎಂದು ಶಮೀನಾ ಬಾನು ಅವರ ಮೈದುನ ಮೆಹಬೂಬ್ ಬಾಷಾ ತಿಳಿಸಿದರು.
ಮೈಸೂರಿನ ಮಹಿಳೆ: ಮೆಕ್ಕಾ ದುರಂತದಲ್ಲಿ ಇಲ್ಲಿನ ಇನಾಯತ್ ಉಲ್ಲಾ ಷರೀಫ್ ಅವರ ಪತ್ನಿ ಜಾಕೀರಾ ಬೇಗಂ (41) ಮೃತಪಟ್ಟಿದ್ದಾರೆ. ದುರಂತ ಸ್ಥಳದ ಸಮೀಪದಲ್ಲಿಯೇ ಜಾಕೀರಾ ಪತಿಗಾಗಿ ಕಾಯುತ್ತಿದ್ದರು.
ಆದರೆ, ‘ದುರಂತದಲ್ಲಿ ಮೃತಪಟ್ಟವರು ಯಾರು ಎಂಬ ಮಾಹಿತಿ ಇಲ್ಲ. ಅಧಿಕೃತವಾಗಿ ಯಾವ ಸಂದೇಶವೂ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಅವರು ತಿಳಿಸಿದರು.