ಬೆಂಗಳೂರು: ‘ಕರ್ನಾಟಕ ಮಾನವ ಕಳ್ಳಸಾಗಾಣಿಕೆ ಜಾಲದ ನೆಚ್ಚಿನ ತಾಣವಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಕಳ್ಳಸಾಗಣೆ ಪ್ರಕರಣಗಳು ದಾಖಲಾಗುವ ರಾಜ್ಯಗಳ ಪೈಕಿ ರಾಜ್ಯ ಮೂರನೇ ಸ್ಥಾನದಲ್ಲಿದೆ’ ಎಂದು ಕ್ರೈಸ್ಟ್ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ವಿಕ್ಟರ್ ಪೌಲ್ ಅವರು ಆತಂಕ ವ್ಯಕ್ತಪಡಿಸಿದರು.
ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಇಂಟರ್ನ್ಯಾಷನಲ್ ಜಸ್ಟೀಸ್ ಮಿಷನ್ ಸಹಯೋಗದಲ್ಲಿ ನಡೆದ ‘ಮಾನವ ಕಳ್ಳಸಾಗಣೆ: ಸವಾಲುಗಳು ಮತ್ತು ಮಧ್ಯಸ್ಥಿಕೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಪಶ್ಚಿಮ ಬಂಗಾಳದಲ್ಲಿ 1096 ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರ ತಮಿಳುನಾಡಿನಲ್ಲಿ 699 ಹಾಗೂ ರಾಜ್ಯದಲ್ಲಿ 472 ಪ್ರಕರಣಗಳು ದಾಖಲಾಗಿವೆ’ ಎಂದರು.
‘ರಾಜ್ಯದಲ್ಲಿ ವರ್ಷಕ್ಕೆ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಮಹಿಳೆಯರ ಸಾಗಾಣಿಕೆಯೆ ಹೆಚ್ಚಾಗಿದ್ದು, ಲೈಂಗಿಕ ಚಟುವಟಿಕೆಗಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ, ಕಾರ್ಮಿಕರ ಕೊರತೆಯೂ ಈ ದಂಧೆಗೆ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.
ಟಾಟಾ ಸಂಸ್ಥೆಯ ಸಾಮಾಜಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪಿ.ಎಂ. ನಾಯರ್ ಮಾತನಾಡಿ, ‘ಗ್ರಾಮವೊಂದರಲ್ಲಿ ಯುವತಿಯೊಬ್ಬಳು ಕಾಣೆಯಾಗಿದ್ದಾಳೆಂದರೆ, ಆಕೆ ಯಾರ ಜತೆಯೋ ಓಡಿ ಹೋಗಿದ್ದಾಳೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇರುತ್ತದೆ’ ಎಂದರು.
‘ನೆರೆಯ ರಾಜ್ಯ ಗೋವಾದ ರೆಡ್ಲೈಟ್ ಏರಿಯಾದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 1500 ಯುವತಿಯರನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ ಶೇ 50ರಷ್ಟು ಯುವತಿಯರು ಕರ್ನಾಟಕದವರಾಗಿದ್ದು, ಬಹುತೇಕ ಮಂದಿ ದೇವದಾಸಿ ಪದ್ಧತಿಯ ಹಿನ್ನೆಲೆ ಹೊಂದಿದವರಾಗಿದ್ದರು’ ಎಂದು ಗಮನ ಸೆಳೆದರು
‘ಮಾನವ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಇಂದಿರಾ ಗಾಂಧಿ ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಬಾರಿಗೆ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ (ಮಾನವ ಕಳ್ಳಸಾಗಾಣಿಕೆ ವಿರೋಧಿ) ಎಂಬ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ’ ಎಂದರು.