ಬೆಂಗಳೂರು: ಈ ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಎರಡನ್ನೂ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರೂ ವಾಸ್ತವವಾಗಿ ನಡೆಯುವುದು ಯಾವುದು ಎಂಬ ಬಗ್ಗೆ ಕಾಂಗ್ರೆಸ್ನಲ್ಲಿ ತೀವ್ರ ಕುತೂಹಲ ಮೂಡಿದೆ ಮತ್ತು ಇದಕ್ಕೆ ಹೊಂದಿಕೊಂಡಂತೆ ಪ್ರಬಲ ಲಾಬಿಯೂ ಆರಂಭವಾಗಿದೆ.
ಬಹಿರಂಗವಾಗಿ ಪುನಾರಚನೆ ಮಾಡುವುದಾಗಿ ಹೇಳುತ್ತಿದ್ದರೂ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಸಂಪುಟ ವಿಸ್ತರಣೆಗೆ ಸೀಮಿತರಾಗಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ದೇಶ ಎನ್ನುತ್ತವೆ ಮೂಲಗಳು. ಆದರೆ, ಈಗಲ್ಲದಿದ್ದರೆ ಇನ್ನು ಇಲ್ಲವೇ ಇಲ್ಲ ಎಂದು ಮನಗಂಡಿರುವ ಸಚಿವ ಸ್ಥಾನದ ಪ್ರಭಾವಿ ಅಕಾಂಕ್ಷಿಗಳು ರಾಜ್ಯ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಪುನಾರಚನೆ ಪರವಾಗಿ ಭಾರಿ ಲಾಬಿ ನಡೆಸಿದ್ದಾರೆ.
ಹೀಗಾಗಿ ಈ ಮಾಸಾಂತ್ಯ ಅಥವಾ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವುದು ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಪ್ರಶ್ನೆಗೆ ಅಮೆರಿಕ ಪ್ರವಾಸದಲ್ಲಿರುವ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ದೆಹಲಿಗೆ ಹಿಂತಿರುಗಿದ ನಂತರವೇ ಉತ್ತರ ದೊರೆಯಲಿದೆ. ಸಿಂಗ್ ಅವರು ದೆಹಲಿಗೆ ಹಿಂತಿರುಗಲಿದ್ದು, ಇದರ ಬೆನ್ನಲ್ಲೇ ಬಹುತೇಕ ಸೆ.23 ಅಥವಾ 24ರಂದು ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಸಂಪುಟ ವಿಚಾರದ ಬಗ್ಗೆ ಸ್ಪಷ್ಟತೆ ದೊರೆಯಲಿದೆ ಎನ್ನುತ್ತವೆ ಮೂಲಗಳು.
ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಿರುವ ಕಾರಣ ಸಂಪುಟ ಪುನಾರಚನೆಗೆ ಕೈ ಹಾಕಿದರೆ ಅದು ಅನಗತ್ಯವಾಗಿ ಗೊಂದಲ ಸೃಷ್ಟಿಸಬಹುದು ಎಂಬ ಆತಂಕವಿರುವುದರಿಂದ ಖಾಲಿ ಇರುವ ಸ್ಥಾನ ತುಂಬುವ ಬಯಕೆ ಸಿಎಂ ಅವರದ್ದು. ಇದಕ್ಕೆ ಹೈಕಮಾಂಡ್ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಸಂಪುಟ ಸೇರುವುದು ಇದೀಗ ಖಚಿತ. ಕುರುಬರೊಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಈಡೇರಿಸಲು ಸಿಎಂ ಈ ಬಾರಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಈ ಅವಕಾಶ ಎಚ್.ವೈ.ಮೇಟಿ ಅವರಿಗೆ ಇದೆ. ಆದರೆ, ಪರಮೇಶ್ವರ್ ಅವರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷಗಿರಿಗೆ ವೀರಶೈವ ಸಮುದಾಯದ ಎಸ್.ಆರ್. ಪಾಟೀಲ್ ಅವರು ಅಧ್ಯಕ್ಷರಾದರೆ ಮಾತ್ರ ಮೇಟಿಗೆ ಅವಕಾಶ. ಏಕೆಂದರೆ, ಪ್ರಸ್ತುತ ಬಾಗಲಕೋಟೆ ಜಿಲ್ಲೆಯವರಾದ ಎಸ್.ಆರ್.ಪಾಟೀಲ್ ಹಾಗೂ ಉಮಾಶ್ರೀ ಸಂಪುಟದಲ್ಲಿದ್ದಾರೆ. ಹೀಗಿರುವಾಗ ಅದೇ ಜಿಲ್ಲೆಯವರಾದ ಮೇಟಿ ಅವರನ್ನು ಮೂರನೆಯವರಾಗಿ ಸಂಪುಟಕ್ಕೆ ಸೇರ್ಪಡೆ ಮಾಡುವುದು ಕಷ್ಟ. ಎಸ್.ಆರ್.ಪಾಟೀಲ್ಗೆ ಅಧ್ಯಕ್ಷಗಿರಿ ಒಲಿಯದಿದ್ದರೆ ಆಗ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಅದೃಷ್ಟವೊಲಿಯುವ ಸಾಧ್ಯತೆಯಿದೆ.
ಇವರಲ್ಲದೆ, ಹಾಸನದ ಎ.ಮಂಜು, ಹಾವೇರಿಯಿಂದ ಮನೋಹರ ತಹಶೀಲ್ದಾರ್ ಅಥವಾ ಧಾರವಾಡದ ವಿನಯ ಕುಲಕರ್ಣಿ ಅವರ ಹೆಸರು ಕೇಳಿಬಂದಿದೆ.
ಡಿಸಿಎಂ ಪಟ್ಟಕ್ಕೆ ಪರಂ ಕಡೇ ಪ್ರಯತ್ನ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಂಪುಟ ಸೇರುವುದು ಖಚಿತ. ಆದರೆ, ಅವರಿಗೆ ಡಿಸಿಎಂ ಪಟ್ಟ ಒಲಿಯುವುದೇ?
ಡಿಸಿಎಂ ಹುದ್ದೆ ಪರಮೇಶ್ವರ್ಗೆ ದೊರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಮನಸ್ಸು ಮಾಡುವುದು ಅತ್ಯಗತ್ಯ. ಇದಕ್ಕಾಗಿಯೇ ಪರಮೇಶ್ವರ್ ಅವರು ಇತ್ತೀಚೆಗೆ ಸಿಎಂ ಅವರೊಂದಿಗೆ ಉತ್ತಮ ಬಾಂಧವ್ಯ ರೂಢಿಸಿಕೊಂಡಿದ್ದಾರೆ. ಬಿಬಿಎಂಪಿ ಮೈತ್ರಿ ವಿಚಾರದಲ್ಲಂತೂ ಪರಮೇಶ್ವರ್ ಅವರು ಸಿಎಂಗೆ ಅತ್ಯುತ್ತಮವಾಗಿ ಸಹಕಾರ ನೀಡಿದ್ದಾರೆ. ಜತೆಗೆ, ದಲಿತ ಸಿಎಂ ಆಗ್ರಹ ಹಿನ್ನೆಲೆಯಲ್ಲಿ ನಿಕಟ ಭವಿಷ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಹಿಂತಿರುಗುವಂತಾದರೆ ಅದನ್ನು ತಡೆಗಟ್ಟಲು ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ತಂತ್ರವನ್ನು ಸಿಎಂ ಬಳಸಬಹುದು ಎನ್ನಲಾಗಿದೆ.
ಈ ಮಾತುಗಳಿಗೆ ಇಂಬು ನೀಡುವಂತೆ ಪರಮೇಶ್ವರ್ ಆಪ್ತ ವಲಯದಲ್ಲಿ ಭಾರಿ ಸಂಭ್ರಮ ಕಂಡು ಬರುತ್ತಿದೆ. ಅಲ್ಲದೆ, ಪರಮೇಶ್ವರ್ ಅವರು ಮಂಗಳವಾರ ಸಂಜೆ ಸಿದ್ದರಬೆಟ್ಟದಲ್ಲಿದ್ದ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ದಿಢೀರನೇ ದೆಹಲಿಯಾತ್ರೆ ಕೈಗೊಂಡಿದ್ದಾರೆ. ಬುಧವಾರ ಹಾಗೂ ಗುರುವಾರ ದೆಹಲಿಯಲ್ಲೇ ತಂಗಲಿರುವ ಅವರು, ಸೋನಿಯಾ ಆಪ್ತರಾದ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಡಿಸಿಎಂ ಹುದ್ದೆಗಾಗಿ ಕಡೆಕ್ಷಣದ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಸಿಎಂ ಆಪ್ತ ವಲಯ ಮಾತ್ರ ಇಂತಹ ಸಾಧ್ಯತೆಯನ್ನು ನಿರಾಕರಿಸುತ್ತದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಿದ ಉದಾಹರಣೆಯೂ ಇತ್ತೀಚಿನ ವರ್ಷಗಳಲ್ಲಿ ಇಲ್ಲ. ಹೀಗಾಗಿ ಕರ್ನಾಟಕದಲ್ಲಿ ಅಂತಹ ಪ್ರಯೋಗ ಸಾಧ್ಯವಿಲ್ಲ ಎನ್ನುತ್ತವೆ.
-ಉದಯವಾಣಿ