ಕರ್ನಾಟಕ

ಮೋಹಕ ಮೆಹಂದಿಯ ಸಾಂಸ್ಕøತಿಕ ಮಹತ್ವ

Pinterest LinkedIn Tumblr

mehadiಮೆಹಂದಿ..! ಈ ಹೆಸರು ಕೇಳಿದ ತಕ್ಷಣ ಭಾರತೀಯ ಹೆಣ್ಣುಮಕ್ಕಳ ಕಣ್ಣರಳುತ್ತದೆ. ಹೌದು! ಮೆಹಂದಿ ಭಾರತೀಯರ ಪಾಲಿಗೆ ಪುರಾತನ ಕಲೆ ಮಾತ್ರವಲ್ಲದೆ, ಶುಭ ಸಮಾರಂಭಗಳಾದ ಮದುವೆ, ಹಬ್ಬ-ಹರಿದಿನ, ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸಾಂಸ್ಕøತಿಕ ಹಿರಿಮೆ ಹೊಂದಿರುವ ಕಲೆ. ಭಾರತೀಯರ ವಿವಾಹ ಸಮಾರಂಭಗಳಲ್ಲಿ ಮೆಹಂದಿ ಹಚ್ಚುವ ಕ್ರಿಯೆ ಮಹತ್ವಪೂರ್ಣವಾಗಿದ್ದು, ಮದುವೆಯ ಮುನ್ನಾ ದಿನ `ಮೆಹಂದಿ ಕಾ ರಾತ್’ (ಮೆಹಂದಿ ರಾತ್ರಿ) ಎಂದೇ ಪ್ರಸಿದ್ಧವಾಗಿದೆ. ಇದೊಂದು ವಿನೋದಪೂರ್ಣ ವಿವಾಹಪೂರ್ವ ಸಮಾರಂಭವಾಗಿದ್ದು, ಸಾಂಪ್ರದಾಯಿಕ ಹಾಗೂ ಸಾಂಸ್ಕøತಿಕ ಬೇರುಗಳನ್ನು ಹೊಂದಿದೆ.

ಮದುಮಗ ಹಾಗೂ ಮದುಮಗಳಿಗೆ ಮೆಹಂದಿ ಹಚ್ಚುವುದು ಭಾರತದ ಅತ್ಯಂತ ಪುರಾತನ ಸಂಪ್ರದಾಯವಾಗಿದ್ದು, ಮುಖ್ಯವಾಗಿ ಮದುಮಗಳಿಗೆ ಸುವಿಸ್ತಾರವಾಗಿ ಆಕೆಯ ಹಸ್ತ ಹಾಗೂ ಪಾದಗಳ ಮೇಲೆ ಮೆಹಂದಿಯ ಚಿತ್ತಾರವನ್ನು ಬಿಡಿಸಲಾಗುತ್ತದೆ. ಆದರೆ, ಮದುಮಗನಿಗೆ ಕೇವಲ ಶುಭಸೂಚವೆಂದು ಪುಟ್ಟ ಮೆಹಂದಿ ಚಿತ್ತಾರವನ್ನು ಬಿಡಿಸಲಾಗುತ್ತದೆ. ಭಾರತೀಯರ ವಿವಾಹ ಸಮಾರಂಭಗಳಲ್ಲಿ ಮಾತ್ರವಲ್ಲದೆ, ನೆರೆಯ ದೇಶಗಳಾದ ಪಾಕಿಸ್ತಾನ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲೂ ವಿವಾಹ ಸಮಾರಂಭಗಳಲ್ಲಿ ಮೆಹಂದಿ ಹಚ್ಚುವುದು ಒಂದು ಸಂಪ್ರದಾಯವಾಗಿ ಬೆಳೆದು ಬಂದಿದ್ದು, ಮುಸ್ಲಿಮರಲ್ಲೂ ಈ ಸಂಪ್ರದಾಯ ಜನಪ್ರಿಯವಾಗಿದೆ.

ಇಸ್ಲಾಂ ಸಾಹಿತ್ಯಗಳ ಪ್ರಕಾರ ಪ್ರವಾದಿ ಮುಹಮ್ಮದ್ ತಮ್ಮ ಗಡ್ಡಕ್ಕೆ ಮೆಹಂದಿ ಬಣ್ಣವನ್ನು ಹಚ್ಚಿಕೊಳ್ಳುತ್ತಿದ್ದರಂತೆ. ಅಲ್ಲದೆ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಮೆಹಂದಿಯನ್ನು  ಹಚ್ಚುತ್ತಿದ್ದರಂತೆ.  ಈ ಎಲ್ಲ ಹಿನ್ನೆಲೆಯಲ್ಲಿ ಭಾರತ ಉಪಖಂಡ ಸೇರಿದಂತೆ ಅರಬ್ ರಾಷ್ಟ್ರಗಳಲ್ಲೂ ಮೆಹಂದಿ ಸಮಾರಂಭ ಮಹತ್ವ ಪಡೆದುಕೊಂಡಿದೆ. ಮೆಹಂದಿಯನ್ನು ವಿವಾಹ ಭಾಂಧವ್ಯದ ಸಂಕೇತ ಎಂದು ಪರಿಗಣಿಸಲಾಗಿದ್ದು, ಇದಕ್ಕೆ `ಶುಭಶಕುನ’ ಎಂದೂ ಕರೆಯುತ್ತಾರೆ.

ಮೆಹಂದಿಯ ಗಾಢತೆಯ ಮೇಲೆ ಭಾವಿ ದಂಪತಿಗಳ ನಡುವಿನ ಪ್ರೀತಿ-ಪ್ರೇಮ ನಿರ್ಧಾರವಾಗುತ್ತದೆ ಎಂಬ ನಂಬಿಕೆಯೂ ಚಾಲ್ತಿಯಲ್ಲಿದೆ. ಆ ಪೈಕಿ ಮದುಮಗಳ ಹಸ್ತದ ಮೇಲಿನ ಮೆಹಂದಿ ಗಾಢವಾಗಿ ಮೂಡಿಬಂದರೆ ಅದು ಭಾವಿ ದಂಪತಿಗಳ ನಡುವಿನ ಗಾಢ ಪ್ರೀತಿಯನ್ನು ಸಂಕೇತಿಸುತ್ತದೆ; ಮೆಹಂದಿಯ ಗಾಢತೆ ಮದುಮಗಳು ಹಾಗೂ ಆಕೆಯ ಅತ್ತೆಯ ನಡುವಿನ ಹೊಂದಾಣಿಕೆಯನ್ನು ಸೂಚಿಸುತ್ತದೆ;  ಮೆಹಂದಿಯ ಬಣ್ಣ ಎಷ್ಟು ದೀರ್ಘ ಕಾಲ ಉಳಿಯುತ್ತದೋ ಅಷ್ಟೂ ನೂತನ ದಂಪತಿಗಳ ಪಾಲಿಗೆ ಶುಭವಾಗಲಿದೆ ಹಾಗೂ ಮೆಹಂದಿಯ ಗಾಢತೆ ನೂತನ ದಂಪತಿಗಳ ಸಂತಾನೋತ್ಪತ್ತಿ ಶಕ್ತಿಗೆ ಸೂಚಕವಾಗಿರುತ್ತದೆ ಎಂಬ ನಂಬಿಕೆಗಳೂ ಬೇರೂರಿವೆ.

ಮೆಹಂದಿ (ಹೆನ್ನಾ) ತನ್ನ ವೈದ್ಯಕೀಯ ಗುಣಗಳಿಂದಲೂ ಪ್ರಸಿದ್ಧವಾಗಿದೆ. ಮೆಹಂದಿಗೆ ತಂಪು ಮಾಡುವ ಶಕ್ತಿಯಿದ್ದು, ಅದರಿಂದ ತಲೆನೋವು,ಒತ್ತಡ ನಿವಾರಣೆ ಹಾಗೂ ಜ್ವರಶಮನವಾಗುತ್ತದೆ. ಮೆಹಂದಿ ಗಿಡಮೂಲಿಕೆ ಉಗುರುಗಳ ಬೆಳವಣಿಗೆಗೂ ಪೂರಕವಾಗಿದೆ. ಹೀಗಾಗಿ ನೂತನವಾಗಿ ವಿವಾಹವಾಗುತ್ತಿರುವ ವಧು-ವರರು ವಿವಾಹದ ಒತ್ತಡದಿಂದ ಹೊರಬರಲು ಮೆಹಂದಿಯನ್ನು ಹಚ್ಚುವ ಸಂಪ್ರದಾಯವೂ ಇದೆ. ವಿವಾಹಪೂರ್ವದಲ್ಲಿ ಮೆಹಂದಿ ಹಚ್ಚುವುದರಿಂದ ವಧು-ವರರನ್ನು ವೈರಾಣು ಜ್ವರಕ್ಕೆ ಒಳಗಾಗುವುದರಿಂದ ತಪ್ಪಿಸಬಹುದಾಗಿದೆ.

ಮಹಿಳೆಯರು ಹಲವಾರು ತಲೆಮಾರುಗಳಿಂದ ಮೆಹಂದಿಯನ್ನು ತಮ್ಮ ಹಸ್ತ ಹಾಗೂ ಪಾದಗಳನ್ನು ಶೃಂಗರಿಸಿಕೊಳ್ಳಲು ಬಳಸುತ್ತಿದ್ದು, ವಿವಿಧ ಬಗೆಯ ಸಂಕೀರ್ಣ ಹಾಗೂ ಸಾಧಾರಣ ರೇಖಾಕೃತಿಯ ಚಿತ್ರಗಳು ಕೆಡುಕನ್ನು ಹೊಡೆದೋಡಿಸುವ, ಸಂತಾನೋತ್ಪತ್ತಿಯನ್ನು ಉತ್ತೇಜಿಸುವ ಹಾಗೂ ಧನಾತ್ಮಕ ಶಕ್ತಿಯನ್ನು ಸೆಳೆಯುವ ಸಾಮಥ್ರ್ಯವನ್ನು ಹೊಂದಿದೆ ಎಂಬ ನಂಬಿಕೆ ಹೊಂದಿದ್ದಾರೆ.

ವರ್ಣರಂಜಿತ ಮೆಹಂದಿ ಸಮಾರಂಭ:
ಮೆಹಂದಿ ಸಮಾರಂಭ ವರ್ಣರಂಜಿತವೂ, ಸಂಗೀತಮಯವೂ ಹಾಗೂ ಜೀವಂತ ಸಂಭ್ರಮವೂ ಆಗಿರುತ್ತದೆ. ವಿವಿಧ ಕುಟುಂಬಗಳು ವಿವಿಧ ಬಗೆಯ ಮೆಹಂದಿ ಸಂಪ್ರದಾಯವನ್ನು ಹೊಂದಿದ್ದು,  ವಿವಾಹದ ಮುನ್ನಾ ದಿನ ಸಂಗೀತ ಸಂಜೆಯೊಂದಿಗೆ ಮೆಹಂದಿ ಸಮಾರಂಭವನ್ನು ಏರ್ಪಡಿಸಲಾಗುತ್ತದೆ.  ವಧು ಹಾಗೂ ಆಕೆಯ ಕುಟುಂಬದ ಇತರ ಮಹಿಳೆಯರಿಗೆ ಈ ಸಂದರ್ಭದಲ್ಲಿ ಹಸ್ತ ಮತ್ತು ಪಾದಕ್ಕೆ ಮೆಹಂದಿ ಹಚ್ಚಿ ಸಿಂಗರಿಸಲಾಗುತ್ತದೆ. ಮೆಹಂದಿ ಸಮಾರಂಭದಲ್ಲಿ ವಧು-ವರರ ಕಡೆಯವರು ಪರಸ್ಪರ ವಿನೋದ, ಸಂಗೀತ, ನೃತ್ಯ ಹಾಗೂ ಭೋಜನವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸುತ್ತಾರೆ.

ವಧುವಿನ ಹಸ್ತದ ಮೇಲೆ ಬಿಡಿಸುವ ಮೆಹಂದಿ ಅತ್ಯಂತ ಸಂಕೀರ್ಣವಾಗಿದ್ದು, ಆ ಚಿತ್ತಾರದಲ್ಲಿ ವರನ ಹೆಸರು ಇಲ್ಲವೆ ಮೊದಲ ಅಕ್ಷರವನ್ನು ಬಿಡಿಸಲಾಗಿರುತ್ತದೆ. ವಧುವಿನ ಹಸ್ತದಲ್ಲಿರುವ ಸಂಕೀರ್ಣ ಮೆಹಂದಿ ಚಿತ್ತಾರದಲ್ಲಿ ತನ್ನ ಹೆಸರು ಅಥವಾ  ಮೊದಲ ಅಕ್ಷರವನ್ನು ಹುಡುಕುವಂತೆ ವರನಿಗೆ ಸೂಚಿಸಲಾಗುತ್ತದೆ. ಈ ವಿನೋದಮಯ ಆಟ ಭಾವಿ ದಂಪತಿಗಳ ನಡುವೆ ಬಾಂಧವ್ಯ ಬೆಳೆಯಲು ಸಹಕಾರಿಯಾಗಿದೆ. ಸಾಂಪ್ರದಾಯಿಕ ಮೆಹಂದಿ ಕಲೆ ಇಂದು ಅನೇಕ ಸಂಕೀರ್ಣ ಹಾಗೂ ಚಿತ್ತಾಕರ್ಷಕ ವಿನ್ಯಾಸಗಳ ರೂಪು ಪಡೆದಿದ್ದು, ಈ ಪೈಕಿ ರಾಜಸ್ತಾನ್ ಮೆಹಂದಿ ವಿನ್ಯಾಸ ಹಾಗೂ ಅರಬ್ ಮೆಹಂದಿ ವಿನ್ಯಾಸ ಅತ್ಯಂತ ಜನಪ್ರಿಯವಾಗಿವೆ.

ಇತ್ತೀಚಿನ ದಿನಗಳಲ್ಲಿ ಮೆಹಂದಿಯನ್ನು ಕಲ್ಲು-ಪಚ್ಚೆಗಳೊಂದಿಗೂ ಸಿಂಗರಿಸಲಾಗುತ್ತಿದೆ. ಈ ಬಗೆಯ ಮೆಹಂದಿ ವಿನ್ಯಾಸಗಳು ಇಂದು ವಿಶ್ವದಾದ್ಯಂತ ವಧು-ವರರÀ ನಡುವೆ ಅತ್ಯಂತ  ಜನಪ್ರಿಯವಾಗಿ ಬದಲಾಗಿವೆ. ಪ್ರತಿ ಮೆಹಂದಿ ವಿನ್ಯಾಸವೂ ವಿವಿಧ ಮಾದರಿಯ ಸಂಕೀರ್ಣತೆಯನ್ನು ಹೊಂದಿದ್ದು, ಪ್ರತಿ ವಧುವಿಗೂ ಒಪ್ಪುವಂತಹ ವಿಶಿಷ್ಟ ವಿನ್ಯಾಸಗಳನ್ನು ಸಿದ್ಧಗೊಳಿಸಬಹುದಾಗಿದೆ. ಮೆಹಂದಿ ಕಲೆಗೆ ವಿಶೇಷ ಸಾಂಸ್ಕøತಿಕ ಮಹತ್ವವೂ ಇದ್ದು, ಕರ್ವಾ ಚೌದ್, ದೀಪಾವಳಿ ಸೇರಿದಂತೆ ಹಲವಾರು ಭಾರತೀಯ ಹಬ್ಬಗಳಲ್ಲಿ ಮೆಹಂದಿ ಚಿತ್ತಾರವನ್ನು ಮಹಿಳೆಯರು ಬಿಡಿಸಿಕೊಳ್ಳುತ್ತಾರೆ. ಆದರೆ, ಸಾಂಪ್ರದಾಯಿಕವಾಗಿ ಮೆಹಂದಿಗೆ ಆಳವಾದ ಸಾಂಸ್ಕøತಿಕ ಹಾಗೂ ಸಾಮಾಜಿಕ ಬೇರುಗಳಿರುವುದು ವಿವಾಹ ಸಮಾರಂಭಗಳಲ್ಲಿಯೇ.

ವೇದ ಗ್ರಂಥಗಳ ಪ್ರಕಾರ ಹಸ್ತದ ಮೇಲೆ ಮೂಡಿಸುವ ಮೆಹಂದಿ ಹಾಗೂ ಅರಿಶಿಣವನ್ನು ಮಿಶ್ರ ಮಾಡಿ ಮೂಡಿಸುವ ಚಿತ್ತಾರ ಸೂರ್ಯನ ಒಳ ಮತ್ತು ಹೊರ ಮೈಬಣ್ಣದ ಸಂಕೇತ. ಹಳದಿ ಸೂರ್ಯನ ಹೊರ ಮೈಬಣ್ಣವನ್ನು ಸಂಕೇತಿಸಿದರೆ, ಕೆಂಪು ಒಳ ಮೈಬಣ್ಣವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಈ ಚಿತ್ತಾರದಲ್ಲಿ ಮನುಷ್ಯನ ಒಳಗಿನ ಬೆಳಕನ್ನು ಎಚ್ಚರಿಸುವ ಕ್ರಿಯೆ ಇದೆ ಎಂಬ ನಂಬಿಕೆಯೂ ಅಡಗಿದೆ. ಸಸ್ಯಶಾಸ್ತ್ರಜ್ಞರ ಪ್ರಕಾರ ಲಾಸೋನಿಯಾ ಇನರ್ಮಿಸ್ ಎಂಬ ಪ್ರಭೇದದ ಹೆಸರಲ್ಲಿ ಕರೆಯಲ್ಪಡುವ ಮೆಹಂದಿ ಈಜಿಪ್ಟ್ ಮೂಲದ್ದಾಗಿದ್ದು, ಈಜಿಪ್ಟ್ ಜನರು ಕ್ರಿ.ಶ. 700ರವರೆಗೆ ನಿರಂತರವಾಗಿ ಭಾರತಕ್ಕೆ ಮೆಹಂದಿಯನ್ನು ಕೊಂಡೊಯ್ಯುತ್ತಿದ್ದರು ಎಂದು ಹೇಳುತ್ತಾರೆ. ಚಾರಿತ್ರಿಕವಾಗಿ ಮೆಹಂದಿಯನ್ನು ಔಷಧ ತಯಾರಿಕೆ, ಬಟ್ಟೆ ಹಾಗೂ ಚರ್ಮಗಳಿಗೆ ಬಣ್ಣ ಹಚ್ಚಲು, ಕುದುರೆ ಬಾಲ ಹಾಗೂ ಇತರ ಪ್ರಾಣಿಗಳ ಬಾಲಕ್ಕೆ  ಹಚ್ಚಲು ಬಳಸುತ್ತಿದ್ದದ್ದು ಕಂಡುಬಂದಿದೆ.

ಮೆಹಂದಿ ಕಲೆಯಲ್ಲಿ ಹಲವಾರು ಬಗೆಯಿದ್ದು, ಭಾರತೀಯ ಮೆಹಂದಿ ವಿನ್ಯಾಸ, ಅರಬ್ ಮೆಹಂದಿ ವಿನ್ಯಾಸ ಹಾಗೂ ಪಾಕಿಸ್ತಾನಿ ಮೆಹಂದಿ ವಿನ್ಯಾಸ ಎಂದು ವಿಂಗಡಿಸಲಾಗಿದೆ. ಮಹಿಳೆಯರು ಈ ಎಲ್ಲ  ವಿನ್ಯಾಸಗಳನ್ನೂ ಸಂದರ್ಭಕ್ಕನುಗುಣವಾಗಿ ತಮ್ಮ ಹಸ್ತದ ಮೇಲೆ ಬಿಡಿಸಿಕೊಳ್ಳುತ್ತಾರೆ. ಮೆಹಂದಿ ಕಲೆ ಭಾರತೀಯ ಉಪಖಂಡದಲ್ಲಿ ಸ್ಥಳೀಯತೆಯನ್ನು ಪಡೆದಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶದ ಮಹಿಳೆಯರು ಮೆಹಂದಿಯನ್ನು ವಿವಾಹ, ಧಾರ್ಮಿಕ ಕಾರ್ಯಕ್ರಮ ಹಾಗೂ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಅರಬ್ ರಾಷ್ಟ್ರಗಳಲ್ಲಿ ಮೆಹಂದಿ 5000ಕ್ಕೂ ಹೆಚ್ಚು ವರ್ಷಗಳಿಂದ ಶುಭ, ಆರೋಗ್ಯ ಹಾಗೂ ಪ್ರಜ್ಞಾವಂತಿಕೆಯನ್ನು ಸಂಕೇತಿಸುತ್ತಾ ಬರುತ್ತಿದೆ. ಮೆಹಂದಿ ಗಿಡವು ಧನಾತ್ಮಕ ಗುಣಗಳನ್ನು ಹೊಂದಿದ್ದು, ಪುರಾತನ ದಿನಗಳ ಒಳಿತು ಮತ್ತು ಕೆಡುಕು ನಂಬಿಕೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಮೆಹಂದಿ ಮೂಲತಃ ಸಂಸ್ಕøತದ ಮೆಂಧಿಕಾ ಶಬ್ದದ ಮೂಲದಿಂದ ಉತ್ಪತ್ತಿಯಾಗಿರುವ ಪದ. ಮೆಹಂದಿ ಹಾಗೂ ಅರಿಶಿನವನ್ನು ಮಿಶ್ರ ಮಾಡಿ ಬಳಸುವ ಬಗ್ಗೆ ಪುರಾತನ ವೇದ ಗ್ರಂಥಗಳಲ್ಲಿಯೇ ಉಲ್ಲೇಖವಾಗಿದೆ. ಮೆಹಂದಿ ಮೂಲತಃ ಮಹಿಳೆಯರ ಹಸ್ತವನ್ನು ಶೃಂಗರಿಸಲು ಬಳಸಲಾಗುತ್ತಿತ್ತೇ ಹೊರತು ಪುರುಷರು ಇದನ್ನು ಬಳಸುತ್ತಿರಲಿಲ್ಲ. ಆದರೆ, ಕಾಲ ಕಳೆದಂತೆ, ಪುರುಷರೂ ಮೆಹಂದಿಯನ್ನು ಹಚ್ಚಿಕೊಳ್ಳುವುದು ಸರ್ವೇಸಾಧಾರಣವಾಗಿ ಬದಲಾಗಿದೆ.

Write A Comment