ಕರ್ನಾಟಕ

ಕೇಳುವವರಿಲ್ಲದ ಇರಕಲ್‌ಗಡಾ ಕೋಟೆ

Pinterest LinkedIn Tumblr

koppalaಕೊಪ್ಪಳ: ಸಮೀಪದಲ್ಲಿರುವ ಇರಕಲ್‌ ಗಡಾದ ಐತಿಹಾಸಿಕ ಕೋಟೆಗೆ ಉಸ್ತುವಾರಿ ವ್ಯವಸ್ಥೆಯೇ ಇಲ್ಲದೇ ಪಾಳುಬಿದ್ದಿದೆ. ನಿಧಿಗಳ್ಳರ ಕಾಟಕ್ಕೆ ನಲುಗಿ ವಿರೂಪಗೊಳ್ಳುತ್ತಿದೆ.

ನಗರದಿಂದ ಸುಮಾರು 15 ಕಿಲೋಮೀಟರ್‌ ಅಂತರದಲ್ಲಿರುವ ಈ ಕೋಟೆ ದೂರದಿಂದಲೇ ಗಮನ ಸೆಳೆಯುತ್ತದೆ. ಬಂಡೆಕಲ್ಲಿನ ಭದ್ರವಾದ ಬುನಾದಿ ಮೇಲೆ ಕೋಟೆ ಕಟ್ಟಲಾಗಿದೆ.

ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಈ ಕೋಟೆಯ ಉಸ್ತುವಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ಕೇಳುವವರಿಲ್ಲದೇ ಐತಿಹಾಸಿಕ ಕೋಟೆ ಪತನದತ್ತ ಸಾಗಿದೆ. ಕೋಟೆಯ ಸುತ್ತಲೂ ಒತ್ತುವರಿ ಮಾಡಿ ಮನೆ ಕಟ್ಟಲಾಗಿದೆ. ಕೋಟೆಯ ಮೇಲಿನ ಕಲ್ಲುಗಳು ಉರುಳಿದರೆ ಮನೆಗಳಿಗೆ ಅಪಾಯ ಖಚಿತ ಎನ್ನುತ್ತಾರೆ ಗ್ರಾಮಸ್ಥರು.

ಕೋಟೆಯೊಳಗೇನಾಗಿದೆ?: ಕೋಟೆ ಪ್ರವೇಶದ್ವಾರದ ಜಾಗದಲ್ಲೇ ಕಲ್ಲುಗಳು ಅಡ್ಡಾದಿಡ್ಡಿ ಬಿದ್ದಿವೆ. ಮೇಲ್ಭಾಗ ಕುರಿ ಮೇಯಿಸುವ ತಾಣವಾಗಿದೆ. ಕೋಟೆಯೊಳಗಿನ ಸಿಹಿನೀರಿನ ಬಾವಿ ಪಾಳುಬಿದ್ದಿದೆ. ಈ ಮೊದಲಿದ್ದ ನುಣುಪುಕಲ್ಲುಗಳನ್ನು ಗ್ರಾಮಸ್ಥರು ಒಯ್ದು ಅರೆಯುವ ಕಲ್ಲುಗಳಾಗಿ, ಅಂಗಳದ ಹಾಸುಗಲ್ಲುಗಳಾಗಿ ಬಳಸಿದ್ದಾರೆ ಎಂದು ಕುರಿಗಾಹಿಗಳು ಹೇಳಿದರು.

ಕೋಟೆಯನ್ನು ಸೂಕ್ಷ್ಮವಾಗಿ ನೋಡಿದರೆ ಅದ್ಭುತ ಜಲಸಂಗ್ರಹ ವ್ಯವಸ್ಥೆ ಇದೆ. ಗುಡ್ಡದ ಮೇಲೆ ಬಿದ್ದ ನೀರು ಸ್ವಲ್ಪವೂ ವ್ಯರ್ಥವಾಗದಂತೆ ಊರಿನ ಕೆರೆ ಸೇರುವ ವ್ಯವಸ್ಥೆ ಇದೆ.

ಕೋಟೆಯ ಕಥೆ: 22 ಎಕರೆ ಪ್ರದೇಶದ ಗುಡ್ಡದ ಮೇಲಿರುವ ಈ ಕೋಟೆಯ ಒಳಾವರಣ ಐದು ಎಕರೆ ವಿಸ್ತೀರ್ಣವಿದೆ. 14ನೇ ಶತಮಾನದ ನಿರ್ಮಾಣ ಎಂದು ಊಹಿಸಲಾಗಿದೆ. ವಿಜಯನಗರದ ತುಳುವವಂಶದ ನರಸನಾಯಕ ಕಟ್ಟಿ, ಮಂಡಗೈ ತಿಮ್ಮಪ್ಪ ನಾಯಕನಿಗೆ ಒಪ್ಪಿಸಿದ. ಮುಂದೆ ಹೈದರಾಬಾದ್‌ ನಿಜಾಮರ ಕಾಲದಲ್ಲಿ ನಿಜಾಮ ಸೈನ್ಯಾಧಿಕಾರಿ ಅಲ್ಲಾಮಗೀರ ಅಹಮದ್‌ ಈ ಕೋಟೆಯನ್ನು ಮೋಸದಿಂದ ಗೆದ್ದ. ಅಲ್ಲಾಮಗೀರ ಹೆಸರಿನಲ್ಲಿರುವ ಹಳ್ಳಿಯೇ ಕೋಟೆಯ ಬುಡದಲ್ಲಿರುವ ಯಲಮಗೇರಿ ಆಗಿದೆ. 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿಯ ಸೈನಿಕರು ಗಜೇಂದ್ರಗಡದಿಂದ ಬಂದು ಈ ಕೋಟೆಯನ್ನು ವಶಪಡಿಸಿಕೊಂಡರು. ಇಳಕಲ್‌ ಗುಡ್ಡ ಮುಂದೆ ಇರಕಲ್‌ಗಡಾ ಆಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.

ಕೊಪ್ಪಳ ಜಿಲ್ಲೆಯನ್ನು ಪುರಾತತ್ವ ಇಲಾಖೆಯ ಹಂಪಿ ಕಿರು ವೃತ್ತದ ವ್ಯಾಪ್ತಿಗೆ ಸೇರಿಸಬೇಕು. ಇರಕಲ್‌ಗಡಾ ಮಾತ್ರವಲ್ಲ ಜಿಲ್ಲೆಯ ಕೋಟೆ ಕೊತ್ತಲಗಳ ಪರಿಸ್ಥಿತಿ ಒಂದೇ ಆಗಿದೆ. ಯಾವುದೋ ಐತಿಹಾಸಿಕ ಸ್ಥಳದ ಹೆಸರಿನಲ್ಲಿ ಜಾತ್ರೆ, ಉತ್ಸವ ಮಾಡುವ ಸಂದರ್ಭ ಅಲ್ಲಿನ ಒಂದು ಸ್ಮಾರಕ ವನ್ನಾದರೂ ಪುನರು ಜ್ಜೀವನಗೊಳಿಸುವ ಕೆಲಸ ಆಗಬೇಕು ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಶರಣಬಸವ ಕೋಲ್ಕಾರ್‌.
*
ಇರಕಲ್‌ಗಡಾ ಕೋಟೆ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಲ್ಲ. ಹಲವು ಕೋಟೆಗಳನ್ನು ಸಂರಕ್ಷಣಾ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿದ್ದೇವೆ.
–ಡಾ.ಶರಣಬಸವ ಕೋಲ್ಕಾರ್,
ಇತಿಹಾಸ ಸಂಶೋಧಕ

Write A Comment