ಮೈಸೂರು: ಕಬಿನಿ ಜಲಾಶಯದಿಂದ ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ನಗರದ ‘ಕಾಡಾ’ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಕಚೇರಿಯ ಗೇಟ್ ಮುರಿದು, ಮುಖ್ಯ ಎಂಜಿನಿಯರ್ ಕೊಠಡಿಯ ಬಾಗಿಲಿನ ಗಾಜನ್ನು ಪುಡಿ ಮಾಡಿದರು.
ನಗರದ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿ ಆವರಣದಲ್ಲಿ ಬೆಳಿಗ್ಗೆ 11.30ರ ವೇಳೆಗೆ ಕಬಿನಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಜಮಾಯಿಸಿದರು. ಪ್ರತಿಭಟನಾಕಾರರು ಕಚೇರಿಗೆ ಪ್ರವೇಶಿಸದಂತೆ ಪೊಲೀಸರು ಮುಖ್ಯ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ ಹಾಕಿ ತಡೆದರು. ಇದರಿಂದ ಆಕ್ರೋಶ ಗೊಂಡ ರೈತರು ಬ್ಯಾರಿಕೇಡ್‌ಗಳನ್ನು ನೂಕಿಕೊಂಡು ಒಳಗೆ ಲಗ್ಗೆ ಇಟ್ಟರು.
ತಕ್ಷಣವೇ ಪೊಲೀಸರು ಮೊದಲ ಮಹಡಿಯಲ್ಲಿ ಪ್ರವೇಶ ದ್ವಾರದ ಗೇಟ್‌ಗೆ ಬೀಗ ಜಡಿದು, ಪ್ರತಿಭಟನಾಕಾರರು ಮುಖ್ಯ ಎಂಜಿನಿಯರ್ ಕಚೇರಿ ಕಡೆಗೆ ಹೋಗದಂತೆ ತಡೆಯಲು ಮುಂದಾದರು. ಉದ್ರಿಕ್ತ ಪ್ರತಿಭಟನಾಕಾರರು ಗೇಟ್ ಮುರಿದು ಒಳನುಗ್ಗಿ ಮುಖ್ಯ ಎಂಜಿನಿಯರ್ ಕಚೇರಿಯ ಬಾಗಿಲಿನ ಗಾಜುಗಳನ್ನು ಪುಡಿಗೊಳಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈಮಿಲಾಯಿಸುವ ಹಂತಕ್ಕೆ ತಲುಪಿತು. ಉದ್ರಿಕ್ತ ರೈತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಹಂತದಲ್ಲಿ ಇಬ್ಬರು ರೈತರಿಗೆ ಅಲ್ಪಪ್ರಮಾಣದ ಪೆಟ್ಟಾಯಿತು.
ವಾಗ್ವಾದ ಸಂದರ್ಭದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರೈತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಕ್ಷಮೆ ಯಾಚಿಸಬೇಕು ಎಂದು ರೈತರು ಪಟ್ಟು ಹಿಡಿದರು. ಪೊಲೀಸ್ ಇನ್‌ಸ್ಪೆಕ್ಟರ್ ಕೆ. ರಾಜೇಂದ್ರ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ತಾಲ್ಲೂಕು ಘಟಕದ ಅಧ್ಯಕ್ಷರಾದ ಕಿರಗಸೂರು ಶಂಕರ್, ಹಾಡ್ಯ ರವಿ, ಪಿ. ರಾಜು, ವರಕೋಡು ಕೃಷ್ಣೇಗೌಡ, ಭಾಗ್ಯರಾಜ್ ಇತರರು ಇದ್ದರು.
ಪ್ರಕರಣ ದಾಖಲು: ಗುಂಪುಗೂಡಿಕೊಂಡು ಸರ್ಕಾರಿ ಸ್ವತ್ತು ಹಾನಿಗೊಳಿಸಿರುವುದರ ವಿರುದ್ಧ ಸೆಕ್ಷನ್ 143ರ ಅಡಿ 40 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೆ.ಆರ್. ಠಾಣೆ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ: ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕುಡಿಯುವ ನೀರಿಗೆ ತತ್ವಾರ ಮತ್ತು ಭೀಕರ ಬರಗಾಲ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಕಾವೇರಿ ಅಚ್ಚುಕಟ್ಟು ಭಾಗದವರೇ ಆಗಿದ್ದೂ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಪೊಲೀಸ್ ಪಡೆ ಬಳಸಿ ರೈತರನ್ನು ಹತ್ತಿಕ್ಕಲು ಮುಂದಾದರೆ ಬೀದಿಗಿಳಿದು ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.
ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಜಲಾಶಯಗಳಿವೆ. ಸಂಕಷ್ಟ ಸೂತ್ರದಡಿ ಕಬಿನಿಯಿಂದ ಮಾತ್ರ ನೀರು ಹರಿಸುವುದು ಎಷ್ಟು ಸರಿ? ಜಲಾಶಯಗಳಲ್ಲಿ ನೀರು ಇಲ್ಲ. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯ ಇಲ್ಲ ಎಂಬುದನ್ನು ಮುಖ್ಯಮಂತ್ರಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕಬಿನಿ ಜಲಾಶಯದಿಂದ ಎರಡು ಟಿಎಂಸಿ ನೀರು ಬಿಡಲಾಗಿದೆ. ಇನ್ನು ಐದು ಟಿಎಂಸಿ ನೀರು ಬಿಡಲಾಗುವುದು ಎಂದು ಸರ್ಕಾರ ಹೇಳಿದೆ. ಕಬಿನಿ ಚಿಕ್ಕ ಜಲಾಶಯ. ಇನ್ನು ಎರಡು ಟಿಎಂಸಿ ನೀರು ಬಿಟ್ಟರೆ ಜಲಾಶಯವೇ ಖಾಲಿಯಾಗುತ್ತದೆ. ಕಬಿನಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 1.20 ಲಕ್ಷ ಎಕರೆಯಲ್ಲಿ ಭತ್ತ ನಾಟಿ ಆಗಿದೆ. ಬೆಳೆಗೆ ನೀರು ಕೊಡದಿದ್ದರೆ ಅಚ್ಚುಕಟ್ಟು ಪ್ರದೇಶಗಳ ರೈತರು ದಂಗೆ ಏಳುತ್ತಾರೆ ಎಂದರು.
ಮುಖ್ಯ ಎಂಜಿನಿಯರ್ ಅವರು ‘ಪೋಸ್ಟ್‌ಮನ್’ನಂತೆ ಕೆಲಸ ಮಾಡಬಾರದು. ರೈತರ ಹಿತ ಕಾಯುವ ಹೊಣೆಯನ್ನು ಪ್ರದರ್ಶಿಸಬೇಕು. ತಕ್ಷಣವೇ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಮತ್ತು ರೈತರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾರ್ಯಪಾಲಕ ಎಂಜಿನಿಯರ್ ಎಸ್. ಸುಂದರಸ್ವಾಮಿ ಮಾತನಾಡಿ, ಮುಖ್ಯ ಎಂಜಿನಿಯರ್ ಅವರು ಮುಖ್ಯಮಂತ್ರಿ ಅವರೊಂದಿಗೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ರೈತರ ಅಹವಾಲನ್ನು ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
**
‘ಕಾಡಾ’ ಕಚೇರಿಗೆ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದರಿಂದ ರೈತರು ಸಿಟ್ಟಿಗೆದ್ದು ಗೇಟ್ ಮತ್ತು ಬಾಗಿಲಿನ ಗಾಜು ಜಖಂಗೊಳಿಸಿದ್ದಾರೆ
-ಕುರುಬೂರು ಶಾಂತಕುಮಾರ್,
ಅಧ್ಯಕ್ಷ, ಕಬಿನಿ ರೈತ ಹಿತರಕ್ಷಣಾ ಸಮಿತಿ