ಬೆಂಗಳೂರು, ಸೆ.27- ಮಹತ್ವದ ಬೆಳವಣಿಗೆಯೊಂದರಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದರೆ ತಮ್ಮ ಸಹಮತವಿದೆ ಎಂದು ಹೈಕಮಾಂಡ್ ವರಿಷ್ಟರಿಗೆ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಉಲ್ಟಾ ಬ್ಯಾಟಿಂಗ್ ಮಾಡಿದ್ದಾರೆ. ಉನ್ನತ ಮೂಲಗಳ ಪ್ರಕಾರ,ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ವಿಧಾನಸಭಾಧ್ಯಕ್ಷ,ಹಿರಿಯ ನಾಯಕ ರಮೇಶ್ ಕುಮಾರ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿದ್ಧರಾಮಯ್ಯ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಹಿಂದಿನ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಉನ್ನತ ಮೂಲಗಳ ಪ್ರಕಾರ,ಇದುವರೆಗೆ ಪರಮೇಶ್ವರ್ ಅವರು ತೆರವು ಮಾಡುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಅವರನ್ನು ತಂದು ಕೂರಿಸಲು ಸಿದ್ಧರಾಮಯ್ಯ ಬಯಸಿದ್ದರು.
ಆದರೆ ಮೊದಲನೆಯದಾಗಿ ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಅವರೇ ಈ ಜಾಗಕ್ಕೆ ಬರಲು ತಯಾರಿಲ್ಲ.ಎರಡನೆಯದಾಗಿ ಲಿಂಗಾಯತ ಸಮುದಾಯದ ಅವರನ್ನು ತಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೆ ಏನೂ ಲಾಭವಾಗುವುದಿಲ್ಲ ಎಂಬ ಅಭಿಪ್ರಾಯ ಹೈಕಮಾಂಡ್‌ನ ಬಹುತೇಕ ನಾಯಕರಲ್ಲಿದೆ. ಒಂದು ವೇಳೆ ಬಿಜೆಪಿಯವರು ರಾಜ್ಯದ ಹಿರಿಯ ಲಿಂಗಾಯತ ನಾಯಕ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಂದರೆ ನಿರ್ವಿವಾದವಾಗಿ ಆ ಸಮುದಾಯ ಬಿಜೆಪಿ ಜತೆ ಇರುತ್ತದೆಯೇ ಹೊರತು,ಕಾಂಗ್ರೆಸ್ ಜತೆ ಬರುವುದಿಲ್ಲ.
ಹೀಗಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೇ ತಂದರೂ ಅದರಿಂದ ಸ್ವಲ್ಪ ಮಟ್ಟಿಗಾದರೂ ಹೊಸ ಮತಬ್ಯಾಂಕ್ ಸೃಷ್ಟಿಯಾಗಬೇಕು.ಬಿಜೆಪಿ ಈಗ ಲಿಂಗಾಯತ ಸಮುದಾಯದ ಶಕ್ತಿ ಕೇಂದ್ರದಂತಾಗಿದ್ದು ಈ ಹಿನ್ನೆಲೆಯಲ್ಲಿ ಬ್ರಾಹ್ಮಣರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಆ ಸಮುದಾಯದ ಶೇಕಡಾ 20 ರಷ್ಟು ಮತಗಳು ಬಂದರೂ ಸಾಕು ಎಂಬುದು ಹೈಕಮಾಂಡ್ ನಾಯಕರ ಅಭಿಪ್ರಾಯ. ದಿನೇಶ್ ಗುಂಡೂರಾವ್ ಇನ್ನೂ ಯುವಕರಾಗಿರುವುದರಿಂದ ಇಡೀ ರಾಜ್ಯ ಸುತ್ತಲು,ಪಕ್ಷವನ್ನು ಸಂಘಟಿಸಲು ಅವರಿಂದ ಸಾಧ್ಯವಿದೆ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪುತ್ರರಾಗಿದ್ದು ಈ ಅಂಶವೂ ಪ್ಲಸ್ ಆಗಲಿದೆ ಎಂಬುದು ಹೈಕಮಾಂಡ್ ನಾಯಕರ ಅಭಿಪ್ರಾಯ.
ಮೂಲಗಳ ಪ್ರಕಾರ,ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಬರುವುದೇ ಸೂಕ್ತ ಎಂದು ಬ್ಯಾಟಿಂಗ್ ಶುರುವಿಟ್ಟುಕೊಂಡಿದ್ದಾರೆ. ಒಂದು ಕಾಲದಲ್ಲಿ ಗುಂಡೂರಾಯರ ಆಪ್ತರಾಗಿದ್ದ ಮಲ್ಲಿಕಾರ್ಜುನ ಖರ್ಗೆ,ಆ ಮೂಲಕ ತಮ್ಮ ಆಪ್ತರಾದ ಗುಂಡೂರಾಯರ ಮಗನಿಗೆ ಹೊಸ ರಾಜಕೀಯ ಮೈಲುಗಲ್ಲನ್ನು ತಲುಪಲು ಸಹಾಯ ಮಾಡುತ್ತಿದ್ದು,ಇದಕ್ಕೆ ಸಿಎಂ ಸಿದ್ಧರಾಮಯ್ಯ ಕೂಡಾ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆಗೆ ಇದೀಗ ಕುತೂಹಲಕಾರಿ ತಿರುವು ಲಭ್ಯವಾಗಿದ್ದು ಸಂಪುಟ ಪುನಾರಚನೆಯ ವೇಳೆಗೆ ಇವೆಲ್ಲವೂ ನಿಚ್ಚಳವಾಗಲಿವೆ.