ಬೆಂಗಳೂರು, ಸೆ.28: ಕಳಸಾ-ಬಂಡೂರಿ ಯೋಜನೆಯ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸದ ಹಿನ್ನೆಲೆ ಯಲ್ಲಿ ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆದು ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ಸಂಬಂಧ ಮತ್ತೊಮ್ಮೆ ಹೊಸದಿಲ್ಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನ್ಯಾಯಾಧಿಕರಣದ ಹೊರಗೆ ವಿವಾದ ಇತ್ಯರ್ಥಕ್ಕೆ ಗೋವಾದ ಸಿಎಂ ಭೇಟಿ ಸೇರಿ ರಾಜ್ಯದ ಹಿತರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದೆಂದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಇತ್ಯರ್ಥಪಡಿಸುವ ವಿಶ್ವಾಸವಿದೆ ಎಂದರು.
ರಾಜಕೀಯ ಸಲ್ಲ: ದೇಶದ ನೆಲ-ಜಲ, ಭಾಷೆ-ಗಡಿ ವಿಚಾರಗಳಲ್ಲಿ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಿಯೂ ರಾಜಕೀಯ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಎಸ್‌ವೈ, ಸೋನಿಯಾ ಅವರನ್ನು ಭೇಟಿ ಮಾಡಬೇಕೆಂದು ಹೇಳಿದ್ದಾರೆ. ಆದರೆ, ದೇಶದ ಪ್ರಧಾನಿ ಸೋನಿಯಾ ಗಾಂಧಿಯೋ ಅಥವಾ ನರೇಂದ್ರ ಮೋದಿ ಎಂದು ಪ್ರಶ್ನಿಸಿದ ಅವರು, ಸಮಸ್ಯೆ ಇತ್ಯರ್ಥಕ್ಕೆ ಬಿಜೆಪಿ ಮುಖಂಡರು ಪ್ರಧಾನಿ ಮನವೊಲಿಸಬೇಕೆಂದು ಆಗ್ರಹಿಸಿದರು.