ದುಬೈ, ಅ.8: ದುಬೈಗೆ ಆಗಮಿಸಿದ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಶಿವರಾಂರವರಿಗೆ ಕನ್ನಡಕೂಟದ ನೇತೃತ್ವದಲ್ಲಿ ಯುಎಇಯಲ್ಲಿರುವ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ದುಬೈ ಕರಾಮದಲ್ಲಿರುವ ಫೋರ್ಚುನ್ ಫ್ಲಾಝಾ ಹೊಟೇಲ್‌ನ ಉತ್ಸವ ರೆಸ್ಟೋರೆಂಟ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವರಾಂರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಎಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶಿವರಾಂರವರು, 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಟ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನೆಮಾದಲ್ಲಿ ಮಿಂಚುವ ಮೂಲಕ ಇಡೀ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದರು.
‘ನಾಗರಹಾವು’ ಸಿನೆಮಾ ಇಂದಿಗೂ ಸಿನೆಮಾಪ್ರಿಯರನ್ನು ಕಾಡುವುದು ಚಾಮಯ್ಯ(ಅಶ್ವತ್ಥ್) ಮೇಷ್ಟ್ರ ಅಭಿನಯ, ರಾಮಚಾರಿಯ(ವಿಷ್ಣುವರ್ಧನ್) ಆಕ್ರೋಶ ಹಾಗೂ ವರದ(ಶಿವರಾಂ) ಪಾತ್ರದ ‘ಸ್ಪೇಷಾಲಿಟಿ’ ಮತ್ತು ಚಿತ್ರದುರ್ಗವನ್ನು ಅಚ್ಚುಕಟ್ಟಾಗಿ ತೋರಿಸುರವ ರೀತಿ. ಈ ಸಿನೆಮಾದಲ್ಲಿ ವರದ ಪಾತ್ರದಲ್ಲಿ ಅಭಿನಯಿಸಿರುವ ಶಿವರಾಂರದ್ದು ವಿಶೇಷ ಪಾತ್ರ. ಜೀವನದಲ್ಲಿ ತಮಾಷೆ…ಮುಂದಾಲೋಚನೆ ಮಾಡದೆ ಮಾತನಾಡುವ ಶಿವರಾಂ, ತನ್ನ ಪ್ರತಿಮಾತಿಗೂ ‘ಸ್ಪೇಷಾಲಿಟಿ’ ಸೇರಿಸಿಕೊಂಡು ಮಾತನಾಡುವ ಮೂಲಕ ಮಿಂಚಿದ್ದಾರೆ.
ಸುಮ್ಮನಿದ್ದ ರಾಮಾಚಾರಿಗೆ ಅಲಮೇಲುವಿನ ಬಗ್ಗೆ ಆಸೆ ಹುಟ್ಟಿಸುವ ವರದ, ಕಡೆಗೆ ಅವನೇ ಆ ಮದುವೆಗೆ ಕಲ್ಲು ಹಾಕಿ ತನ್ನ ತಂಗಿಯ ಜೀವನದ ಅವನತಿಗೆ ಕಾರಣವಾಗುತ್ತಾನೆ. ಇಂಥ ಪಾತ್ರವನ್ನು ಶಿವರಾಂ ಉತ್ತಮವಾಗಿಯೇ ನಿರ್ವಹಿಸಿ, ಸಹಿಅನಿಸಿಕೊಂಡಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಶಿವರಾಂರವರು ಸುಮಾರು 1000 ಹೆಚ್ಚು ನಾಟಕಗಳಲ್ಲಿ ಹಾಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಶರಪಂಜರ’, ‘ಗುರುಶಿಷ್ಯರು’ ಚಿತ್ರಗಳ ಹಾಸ್ಯಪಾತ್ರಗಳು, ‘ಶುಭಮಂಗಳ’ ಚಿತ್ರದ ಪೋಷಕ ಪಾತ್ರ ಶಿವರಾಂ ಅವರಿಗೆ ಸಾಕಷ್ಟು ಹೆಸರುತಂದುಕೊಟ್ಟಿವೆ. ಪ್ರಣಯರಾಜ ಶ್ರೀನಾಥ ಅವರ ಜೊತೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ಶಿವರಾಂ ಅವರದು. ಹಲವು ಆಸಕ್ತಿ ಹಾಗೂ ಬಹುನೈಪುಣ್ಯಗಳ ಶಿವರಾಂ ಅವರು ಚಿತ್ರರಂಗದಲ್ಲಿ ನಿಖರತೆ ಹಾಗೂ ಶಿಸ್ತಿಗೆ ಹೆಸರಾದವರು.
ಪ್ರಸಕ್ತ ಬೆಂಗಳೂರಿನಲ್ಲಿ ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್ ಎಂಬ ವಿಕಲಚೇತನರಿಗಾಗಿ ಸಂಸ್ಥೆಯ ಸಂಚಾಲಕರಾಗಿರುವ ಶಿವರಾಂರವರು, ಇತ್ತೀಚೆಗೆ ಅಮೆರಿಕಾಗೆ ಪ್ರವಾಸಗೈದಿದ್ದು, ಅಲ್ಲಿ ತಮ್ಮ ಸಂಸ್ಥೆಯ ವಿಕಲಚೇತನರ ಕಲಾಪ್ರದರ್ಶನವನ್ನು ಆಯೋಜಿಸಿ ಮೆಚ್ಚುಗೆಗಳಿಸಿದ್ದಾರೆ.
ಶಿವರಾಂರನ್ನು ಸನ್ಮಾನಿಸುವ ಸಂದರ್ಭದಲ್ಲಿ ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಚೇರ್‌ಮೆನ್ ಪ್ರವೀಣ್ ಶೆಟ್ಟಿ, ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಚಿಲ್ಲಿವಿಲಿಯ ಸತೀಶ್ ವೆಂಕಟರಮಣ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಬಿಲ್ಲವಾಸ್ ದುಬೈಯ ಸತೀಶ್ ಪೂಜಾರಿ, ಜೇಮ್ಸ್ ಮೆಂಡೋನ್ಸಾ, ಕನ್ನಡಕೂಟದ ಮಲ್ಲಿಕಾರ್ಜುನ ಗೌಡ, ಸದನ್‌ದಾಸ್, ಯುಎಇ ಮೊಗವೀರ ಸಂಘದ ಬಾಲಕೃಷ್ಣ ಸಾಲ್ಯಾನ್, ಸುಗಂದರಾಜ್ ಬೇಕಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.