ಹೊಸದಿಲ್ಲಿ,ಅ.20: ಪೂರೈಕೆಯನ್ನು ಹೆಚ್ಚಿಸಿ ಬೆಲೆಯನ್ನು ನಿಯಂತ್ರಿಸಲು ಸರಕಾರದ ಕ್ರಮಗಳ ಹೊರತಾಗಿಯೂ ತೊಗರಿ ಬೇಳೆಯ ಚಿಲ್ಲರೆ ಮಾರಾಟ ದರ ಸೋಮವಾರ ಪ್ರತಿ ಕಿಲೋಗೆ 200ರೂ.ತಲುಪಿತು. ಇದರೊಂದಿಗೆ ಬಳಕೆದಾರನ ಸಂಕಷ್ಟವೂ ಇನ್ನಷ್ಟು ಹೆಚ್ಚಿದೆ.
ಕಳೆದ ವಾರದವರೆಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಪ್ರತಿ ಕಿಲೋಗೆ 185 ರೂ.ನಲ್ಲಿ ದೊರೆಯುತ್ತಿತ್ತು. ಮಳೆಯ ಕೊರತೆ ಮತ್ತು ಅಕಾಲಿಕ ಮಳೆಯಿಂದಾಗಿ 2014-15ರ ಬೆಳೆವರ್ಷದಲ್ಲಿ ಉತ್ಪಾದನೆ ಸುಮಾರು ಎರಡು ಮಿಲಿಯ ಟನ್‌ಗಳಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೇಳೆಕಾಳುಗಳ ಬೆಲೆಗಳು ಯಾವುದೇ ಎಗ್ಗಿಲ್ಲದೆ ಹೆಚ್ಚುತ್ತಲೇ ಇವೆ.ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳಂತೆ ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಕಿಲೋಗೆ 85ರೂ.ಗಳಿದ್ದ ತೊಗರಿ ಬೇಳೆಯ ಗರಿಷ್ಠ ಮಾರಾಟ ದರ 200ರೂ.ಗೆ ಜಿಗಿದಿದೆ.
ಕಳೆದ ಐದು ವರ್ಷಗಳಲ್ಲಿ ತೊಗರಿ ಬೇಳೆಯ ದರ ಪ್ರತಿ ಕಿಲೋಗೆ 74 ರಿಂದ 85 ರೂ.ವರೆಗೆ ಇತ್ತು.ಉದ್ದಿನ ಬೇಳೆಯೂ ಹಿಂದೆ ಬಿದ್ದಿಲ್ಲ. ಪ್ರತಿಕಿಲೋಗೆ ದರ ಕಳೆದ ವಾರದ 187ರೂ.ನಿಂದ ತಗ್ಗಿದೆಯಾದರೂ ಈಗಲೂ 170 ರೂ.ಗಳಷ್ಟು ಎತ್ತರದಲ್ಲಿಯೇ ಇದೆ. ವರ್ಷದ ಹಿಂದೆ ಇದೇ ಉದ್ದಿನ ಬೇಳೆ 98 ರೂ.ಗೆ ಸಿಗುತ್ತಿತ್ತು.ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಆಮದು, ದಾಸ್ತಾನಿಗೆ ಕಡಿವಾಣ ಸೇರಿದಂತೆ ಹಲವಾರು ಕ್ರಮಗಳನ್ನು ಸರಕಾರವು ಕೈಗೊಂಡಿದ್ದರೂ ಇವೆರಡು ಬೇಳೆಗಳ ಬೆಲೆಗಳು ಮಾತ್ರ ತಗ್ಗುತ್ತಿಲ್ಲ.