ನೆಲಮಂಗಲ,ಅ.22: ಹತ್ಯೆಯಾದ ಪಿಎಸ್ಐ ಜಗದೀಶ್ ಅವರ ಸರ್ವೀಸ್ ಪಿಸ್ತೂಲ್ ಪತ್ತೆಯಾಗಿದ್ದು, ಅದನ್ನು ಖರೀದಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅ.16ರಂದು ದೊಡ್ಡಬಳ್ಳಾಪುರ ಪಿಎಸ್ಐ ಜಗದೀಶ್ ಕಳವು ಆರೋಪಿಗಳಾದ ಮಧು ಮತ್ತು ಹರೀಶ್ಬಾಬುನನ್ನು ಹಿಡಿಯುವ ಯತ್ನದಲ್ಲಿದ್ದಾಗ ಕಳ್ಳರಿಂದಲೇ ಚಾಕು ಇರಿತಕ್ಕೊಳಗಾಗಿ ಹತ್ಯೆಯಾಗಿದ್ದರು. ಕೊಲೆಯ ನಂತರ ಆರೋಪಿಗಳು ಜಗದೀಶ್ ಅವರ ಸರ್ವೀಸ್ ಪಿಸ್ತೂಲನ್ನು ಕಸಿದು ಅದನ್ನು ಇತರೆ ಸಿಬ್ಬಂದಿಗಳಿಗೆ ತೋರಿಸಿ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದರು. ಕಸಿದುಕೊಂಡಿದ್ದ ಪಿಸ್ತೂಲನ್ನು ಆರೋಪಿಗಳು ಆಂಧ್ರದ ಕರ್ನೂಲ್ನ ಹನುಮಂತರಾಯ ಎಂಬುವವರಿಗೆ ಮಾರಾಟ ಮಾಡಿದ್ದರು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ಪಿಸ್ತೂಲನ್ನು ಖರೀದಿಸಿದ್ದ ಹನುಮಂತರಾಯನನ್ನು ಬಂಧಿಸಿ ಕರೆತಂದಿದ್ದಲ್ಲದೆ, ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಜಗದೀಶ್ನನ್ನು ಹತ್ಯೆ ಮಾಡಿದ ಆರೋಪಿಗಳು ಬೈಕ್ ಹಾಗೂ ಪಿಸ್ತೂಲನ್ನು ಕಸಿದು ಪರಾರಿಯಾಗಿದ್ದರು. ಬೈಕ್ ಪೀಣ್ಯಾ ಬಳಿಯ ಶೋಭಾ ಡೆವಲಪರ್ಸ್ದ ಬಳಿ ಪತ್ತೆಯಾಗಿತ್ತು. ಈಗ ಪಿಸ್ತೂಲ್ ಕೂಡ ಪತ್ತೆಯಾಗಿದೆ.