ಕರ್ನಾಟಕ

ಮೈಸೂರು ಅರಮನೆಯಲ್ಲಿ ಆಯುಧಪೂಜೆ ನೆರವೇರಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

Pinterest LinkedIn Tumblr

mysore

ಮೈಸೂರು, ಅ.22: ಮೈಸೂರು ಅರಮನೆಯಲ್ಲಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಸಾಂಪ್ರದಾಯಿಕವಾಗಿ ಆಯುಧಪೂಜೆಯನ್ನು ನೆರವೇರಿಸಿದರು. ಮುಂಜಾನೆ 6 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಅಂಬಾವಿಲಾಸ ಅರಮನೆಯಲ್ಲಿ ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 6 ರಿಂದ 6.45ರಲ್ಲಿ ಸಲ್ಲುವ ತುಲಾ ಲಗ್ನದಲ್ಲಿ ಅರಮನೆಯಿಂದ ಶ್ರಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಖಾಸಾ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳನ್ನು ಕೊಂಡೊಯ್ದು 7 ರಿಂದ 7.20 ರವರೆಗೆ ಪೂಜೆ ಸಲ್ಲಿಸಿ ವಾಪಸ್ ಅರಮನೆಗೆ ತರಲಾಯಿತು. ನಂತರ ಅಂಬಾವಿಲಾಸ ಅರಮನೆಯಲ್ಲಿ ಖಡ್ಗ, ಗುರಾಣಿ, ಚಾಕು ಇತರೆ ಆಯುಧಗಳನ್ನು ಜೋಡಿಸಿಡಲಾಯಿತು.

ಎಂಟು ಗಂಟೆಗೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿಸಿ ನಂತರ 10.20ರಿಂದ 11.30ರೊಳಗೆ ಸಲ್ಲುವ ಧನುರ್ ಲಗ್ನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆತ್ಮವಿಲಾಸ ಗಣಪತಿಗೆ ವಂದಿಸಿ ತೀರ್ಥ ಸ್ವೀಕರಿಸಿ ಅಂಬಾವಿಲಾಸ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧ ಪೂಜೆ ನೆರವೇರಿಸಿದರು.

ಇದಾದ ನಂತರ ಪಟ್ಟದ ಆನೆ, ಕುದುರೆ, ಹಸು, ಬೆಳ್ಳಿರಥ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸುತ್ತಿದ್ದ ಕಾರುಗಳೂ ಸೇರಿದಂತೆ ಎಲ್ಲಾ ವಾಹನಗಳಿಗೂ ಪೂಜಾ ಕಾರ್ಯ ನೆರವೇರಿಸಲಾಯಿತು.

ಮಧ್ಯಾಹ್ನದ ನಂತರ ಖಾಸಗಿ ದರ್ಬಾರ್, ವಜ್ರಮುಷ್ಠಿ ಕಾಳಗ ನಡೆಯಿತು. ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದವರೆಗೆ ವಿಜಯಯಾತ್ರೆ ನೆರವೇರಿತು. ಮೆರವಣಿಗೆ ನಂತರ ದೇವಸ್ಥಾನದ ಬಳಿ ಇರುವ ಶಮಿ (ಬನ್ನಿ) ವೃಕ್ಷಕ್ಕೆ ಯದುವೀರರು ಪೂಜೆ ಸಲ್ಲಿಸಿದರು. ಸಂಜೆ ಸಿಂಹಾಸನ ವಿಸರ್ಜನೆ, ಆನಂತರ ಕಂಕಣ ವಿಸರ್ಜನೆಯೊಂದಿಗೆ ಮೈಸೂರು ರಾಜಮನೆತನದ 10 ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

Write A Comment