ಮೈಸೂರು, ನ.3- ಮೈಸೂರು ಅರಮನೆ ಸಿಂಹಾಸನವನ್ನು ವರ್ಷ ಪೂರ್ತಿ ಸಾರ್ವಜನಿಕರ ವೀಕ್ಷಣೆಗೆ ಇಡುವ ಕುರಿತು ಶೀಘ್ರವೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ತಿಳಿಸಿದರು. ಮೈಸೂರು ದಸರಾ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಅಭಿನಂದನೆ ಸೂಚಿಸಲು ನಗರದ ಸರ್ಕಾರಿ ಅತಿಥಿಗೃಹದಲ್ಲಿಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದರ್ಬಾರ್ ಹಾಲ್‌ನಲ್ಲಿರುವ ಸಿಂಹಾಸನವನ್ನು ಸಾರ್ವಜನಿಕರು ವೀಕ್ಷಣೆ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುವಿರಿ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ನಿಮಗೆ ಗೊತ್ತಿರುವಷ್ಟೇ ವಿಷಯ ನನಗೂ ಗೊತ್ತಿರುವುದು ಎಂದು ಅಸಹಾಯಕತೆ ತೋಡಿಕೊಂಡರು.
ಅಂಬಾರಿ ವಿಮೆ ಕುರಿತು ರಾಣಿ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಇದೇ ವೇಳೆ ಶ್ರೀನಿವಾಸ ಪ್ರಸಾದ್ ತಿಳಿಸಿದರು. ದಸರಾ ಸಂದರ್ಭದಲ್ಲಿ ಮುಹೂರ್ತ ನೋಡಿ ಸಿಂಹಾಸನ ಹೊರ ತೆಗೆಯಲಾಗುತ್ತದೆ. ಅದೇ ರೀತಿ ದಸರಾ ಮುಗಿದ ನಂತರವೂ ಒಳ್ಳೆಯ ದಿನ ಮುಹೂರ್ತ ನೋಡಿ ಪೂಜೆ ಸಲ್ಲಿಸಿ ವಾಪಸು ನೀಡುತ್ತೇವೆ ಎಂದು ಪ್ರಮೋದಾದೇವಿ ಅವರು ತಿಳಿಸಿದ್ದಾರೆ. ಹಾಗಾಗಿ ಅಲ್ಲಿಯವರೆಗೆ ಸಿಂಹಾಸನ ಅವರ ಸುಪರ್ದಿನಲ್ಲೇ ಇರುತ್ತದೆ ಎಂದು ಹೇಳಿದರು. ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ನಡಸೇಬೇಕೆಂದು ನಿರ್ಧರಿಸಿದ್ದೆವು. ಸರಳವಾದರೂ ಅದ್ಧೂರಿಯಾಗಿಯೇ ನಡೆಯಿತು. ಹಾಗಾಗಿ ಎಲ್ಲರನ್ನೂ ಅಭಿನಂದಿಸುತ್ತೇವೆ ಎಂದು ತಿಳಿಸಿದರು.
2.36 ಲಕ್ಷ ಕ್ವಿಂಟಾಲ್ ಬೇಳೆ ವಶ:
ರಾಜ್ಯಾದ್ಯಂತ ತೊಗರಿಬೇಳೆ ಅಕ್ರಮ ದಾಸ್ತಾನು ಮಾಡಿರುವವರ ಮೇಲೆ ದಾಳಿ ಮಾಡಿ 2.36 ಲಕ್ಷ ಕ್ವಿಂಟಾಲ್ ತೊಗರಿಬೇಳೆ ವಶಪಡಿಸಿಕೊಳ್ಳಲಾಗಿದೆ. ಈ ಬೇಳೆಯನ್ನು ದೀಪಾವಳಿ ಪ್ರಯುಕ್ತ ಪ್ರತಿ ಕುಟುಂಬಕ್ಕೆ 2 ಕೆ.ಜಿ ಯಂತೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಡಿಸಿ ಮೇಲೆ ಹಲ್ಲೆಗೆ ಪ್ರಯತ್ನ:
ಚಾಮರಾಜನಗರದ ಜಿಲ್ಲಾಧಿಕಾರಿ ಕುಂಜಪ್ಪ ಅವರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಚಾಮರಾಜನಗರದಲ್ಲಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಎಲ್ಲ ಕ್ರಮ ಕೈಗೊಂಡಿದ್ದರಿಂದ ಕೆಲ ಮಂದಿ ಡಿಸಿ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು , ಆ ಮೂಲಕ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಲ್ಲುಗಳನ್ನು ತೆಗೆದಿರುವವರಿಗೆ ಮಾತ್ರ ಕಲ್ಲು ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ರಮವಾಗಿ ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.