ಕರ್ನಾಟಕ

ಕೋಮು ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ: ಎ.ಸಯೀದ್

Pinterest LinkedIn Tumblr

sd

ಬೆಂಗಳೂರು, ಡಿ.10: ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಕೋಮು ಭಯೋತ್ಪಾದನೆ ವಿರುದ್ಧ ಸಂಘಟಿತವಾದ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ಕರೆ ನೀಡಿದ್ದಾರೆ.
ಗುರುವಾರ ನಗರದ ಪುರಭವನದಲ್ಲಿ ಎಸ್‌ಡಿಪಿಐ ವತಿಯಿಂದ ಆಯೋಜಿಸಲಾಗಿದ್ದ ಕೋಮು ಭಯೋತ್ಪಾದನೆ ವಿರುದ್ಧದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಈ ಹೋರಾಟ ಯಾವುದೇ ನಿರ್ದಿಷ್ಟವಾದ ಸಂಘಟನೆ, ಪಕ್ಷ ಅಥವಾ ಸರಕಾರದ ವಿರುದ್ಧವಲ್ಲ. ದೇಶದಲ್ಲಿ ಆತಂಕ ಹಾಗೂ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಿರುವವರ ವಿರುದ್ಧವಾಗಿದೆ. ಧಾರ್ಮಿಕ ಸಹಿಷ್ಣುತೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜನಸಾಮಾನ್ಯರು ಸಂಘಟಿತರಾಗಬೇಕು ಎಂದು ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರಮೋದಿ ಸ್ವಾತಂತ್ರ ದಿನಾಚರಣೆ ಅಂಗವಾಗಿ ದೇಶದ ಜನರಿಗೆ ಸಹೋದರತೆ, ಮಾನವೀಯತೆಯ ಭಾಷಣವನ್ನು ಮಾಡುತ್ತಾರೆ. ಆದರೆ, ಅವರ ಕೆಲಸದಲ್ಲಿ ಶೇ.1ರಷ್ಟು ಪ್ರಗತಿಯನ್ನು ನಾವು ಕಾಣಲು ಸಾಧ್ಯವಾಗುತ್ತಿಲ್ಲ. ಸಂಘಪರಿವಾರದ ಕಾರ್ಯಕರ್ತನಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಯೀದ್ ಕಿಡಿಕಾರಿದರು. ಬಿಜೆಪಿ ಹಾಗೂ ಆರೆಸೆಸ್ಸ್‌ನವರದ್ದು ಸಂಕುಚಿತ ಮನಸ್ಥಿತಿ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಗೌರವಿಸುವ ವಿಶಾಲ ಮನೋಭಾವ ಅವರಲ್ಲಿರಲಿಲ್ಲ. ಜನರು ಏನು ತಿನ್ನಬೇಕು, ಏನು ಬರೆಯಬೇಕು ಹಾಗೂ ಯಾವ ರೀತಿಯ ಆಲೋಚನೆಗಳನ್ನು ಮಾಡಬೇಕು ಎಂದು ಅವರು ನಿರ್ಧರಿಸುವಂತಾಗಿದೆ. ದೇಶವನ್ನು ಮತ್ತೆ ಗುಲಾಮಗಿರಿಗೆ ದೂಡುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದರು.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ ಅವರ ಹತ್ಯೆಗಳು ಫ್ಯಾಶಿಸ್ಟ್ ಶಕ್ತಿಗಳಿಂದಲೇ ಆಗಿದೆ. ಇವರ ವಿರುದ್ಧ ಹೋರಾಡಲು ದೇಶದ ಪ್ರಮುಖ ನಗರಗಳಲ್ಲಿ ನಿರಂತರವಾಗಿ ಮೂರು ವಾರಗಳ ವಿವಿಧ ರೂಪಗಳಲ್ಲಿ ಹೋರಾಟ ಹಾಗೂ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಸಯೀದ್ ತಿಳಿಸಿದರು.

ಬಿಎಸ್ಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಾರಸಂದ್ರ ಮುನಿಯಪ್ಪ ಮಾತನಾಡಿ, ದಲಿತರು ಹಾಗೂ ಮುಸ್ಲಿಮರು ಒಗ್ಗಟ್ಟಾಗದಿದ್ದರೆ, ಮನುವಾದಿಗಳು ಸಮಾಜವನ್ನು ಇದೇ ರೀತಿಯಲ್ಲಿ ವಿಭಜನೆ ಮಾಡುತ್ತಿರುತ್ತಾರೆ. ಶೇ.90ರಷ್ಟು ಜನಸಂಖ್ಯೆಯನ್ನು ಹೊಂದಿರುವ ನಾವು ಇವರ ಎದುರು ಬಲಹೀನರಾಗಿರುವುದಕ್ಕೆ ನಾವು ಪರಸ್ಪರ ಕೈ ಜೋಡಿಸದಿರುವುದೇ ಕಾರಣ ಎಂದರು. ದನದ ಮಾಂಸವಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಹತ್ಯೆ ಮಾಡಲಾಯಿತು. ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವ ದಲಿತ ಯುವತಿಯರನ್ನು ನಗ್ನಗೊಳಿಸಿ ಬೀದಿಯಲ್ಲಿ ನಿಲ್ಲಿಸಲಾಗುತ್ತಿದೆ. ದಲಿತ ಹಸುಗೂಸುಗಳನ್ನು ಜೀವಂತವಾಗಿ ದಹನ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗಗಳ ವಿರೋಧಿಗಳಾಗಿವೆ. ಇವರ ರಾಜಕೀಯ ಷಡ್ಯಂತ್ರಗಳ ಬಗ್ಗೆ ನಾವು ಎಚ್ಚರಿಕೆಯಿಂದಿರ ಬೇಕು. ದನದ ಮಾಂಸ ತಿನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎನ್ನುವವರ ವಿರುದ್ಧ ಸಸ್ಯಾಹಾರ ಸೇವಿಸುವವರು ಮಧ್ಯಪ್ರಾಚ್ಯ ದೇಶಗಳಿಗೆ ಹೋಗಬೇಕು ಎಂಬ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಹಿಂದೂಗಳೆಲ್ಲ ಒಂದು ಎನ್ನುವ ಪೇಜಾವರ ಮಠದ ಸ್ವಾಮಿ, ಎಷ್ಟು ಮಂದಿ ದಲಿತರನ್ನು ತಮ್ಮ ಮಠಗಳಲ್ಲಿ ಸ್ವಾಮಿಗಳನ್ನಾಗಿ ಮಾಡಿದ್ದಾರೆ. ಎಷ್ಟು ಮಂದಿಗೆ ಗರ್ಭಗುಡಿಗೆ ಪ್ರವೇಶ ನೀಡಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಮಾರಸಂದ್ರ ಮುನಿಯಪ್ಪ ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ರಘುನಾಥ ರಾಮಚಂದ್ರ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೀರಸಂಗಯ್ಯ, ಎಸ್‌ಡಿಪಿಐ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಪಿಎಫ್‌ಐ ರಾಜ್ಯಾಧ್ಯಕ್ಷ ಸಾಖಿಬ್, ಬಿಬಿಎಂಪಿ ಮಾಜಿ ಸದಸ್ಯೆ ಪ್ರೊ.ನಾಝ್ನೀನ್‌ಬೇಗಮ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ ಮತ್ತಿತರರು ಉಪಸ್ಥಿತರಿದ್ದರು.

Write A Comment