ಕರ್ನಾಟಕ

ಕಲಬುರ್ಗಿ-ಪನ್ಸಾರೆ-ದಾಭೋಲ್ಕರ್ ಕೊಲೆ: ಒಂದೇ ಗುಂಪಿನಿಂದ ನಡೆದ ಕೃತ್ಯ; ಬಳಸಲಾದ ಗುಂಡು ಕಾರ್ಟ್ರಿಜ್‌ಗಳು ಒಂದೇ ಮಾದರಿ

Pinterest LinkedIn Tumblr

kalburgi

ಬೆಂಗಳೂರು, ಡಿ.12: ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿ, ವಿಚಾರವಾದಿಗಳಾದ ಗೋವಿಂದ ಪನ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಇವರ ಹತ್ಯೆಗಳಲ್ಲಿ ಸಾಮ್ಯತೆ ಇದೆ ಎಂದು ವಿಧಿವಿಜ್ಞಾನ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.

ಇವರೆಲ್ಲರ ಹತ್ಯೆಗಳಲ್ಲಿ ಒಂದು ಸಾಮ್ಯತೆಯಿದೆ. ಈ ಮೂವರ ಹತ್ಯೆಗಳು ನಡೆದಿದ್ದ ಸ್ಥಳದಿಂದ ವಶಪಡಿಸಿಕೊಂಡ ಗುಂಡುಗಳ ಕಾರ್ಟ್ರಿಜ್‌ಗಳ ವಿಶ್ಲೇಷಣೆಯು ಈ ಹತ್ಯೆಗಳನ್ನು ಒಂದೇ ಗುಂಪಿನ ಹಂತಕರು ನಡೆಸಿದ್ದಾರೆ ಎಂಬುದನ್ನು ಬಿಚ್ಚಿಟ್ಟಿದೆ.

ಕಲಬುರ್ಗಿಯವರನ್ನು ಈ ವರ್ಷದ ಆಗಸ್ಟ್‌ನಲ್ಲಿ ಧಾರವಾಡದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅದಕ್ಕೂ ಮೊದಲು, ಇದೇ ವರ್ಷದ ಫೆಬ್ರವರಿಯಲ್ಲಿ ಕೊಲ್ಲಾಪುರದಲ್ಲಿ ಕಮ್ಯುನಿಸ್ಟ್ ನಾಯಕ ಹಾಗೂ ವಿಚಾರವಾದಿ ಗೋವಿಂದ ಪನ್ಸಾರೆಯನ್ನು ಗುಂಡಿಕ್ಕಿ ಕೊಲೆಗೈಯಲಾಯಿತು. ಇನ್ನೋರ್ವ ವಿಚಾರ ವಾದಿ ನರೇಂದ್ರ ದಾಭೋಲ್ಕರ್‌ರನ್ನು 2013ರಲ್ಲಿ ಪುಣೆಯಲ್ಲಿ ಗುಂಡು ಹಾರಿಸಿ ಕೊಲ್ಲಲಾಯಿತು. ಮೃತರ ವಿವರಗಳು, ಹತ್ಯೆಗೆ ಸಂಭಾವ್ಯ ಕಾರಣಗಳು, ಹತ್ಯೆಯ ವಿಧಾನ ಮತ್ತು ಹತ್ಯೆಗಳಿಗಾಗಿ ಬಳಸಿದ 7.65 ಎಂ.ಎಂ. ನಾಡ ಪಿಸ್ತೂಲುಗಳ ಆಧಾರದಲ್ಲಿ ಈ ಮೂರು ಪ್ರಕರಣಗಳ ನಡುವೆ ಈಗಾಗಲೇ ನಂಟು ಕಲ್ಪಿಸಲಾಗಿತ್ತು. ಈಗ ಕಾರ್ಟ್ರಿಜ್‌ಗಳು ಕೊಲೆಗಳ ನಡುವಿನ ಸಾಮ್ಯತೆಗೆ ಮೊದಲ ಭೌತಿಕ ಸಾಕ್ಷವನ್ನು ಒದಗಿಸಿವೆ.

69 ವರ್ಷದ ದಾಭೋಲ್ಕರ್‌ರನ್ನು ಪುಣೆಯಲ್ಲಿ 7.65 ಎಂ.ಎಂ. ನಾಡ ಪಿಸ್ತೂಲಿನಿಂದ ನಾಲ್ಕು ಗುಂಡುಗಳನ್ನು ಹಾರಿಸಿ ಕೊಲೆಗೈಯಲಾಗಿತ್ತು. 81 ವರ್ಷದ ಪನ್ಸಾರೆ ಮತ್ತು ಅವರ ಪತ್ನಿ ಉಮಾ ಪನ್ಸಾರೆ ಮೇಲೆ ಎರಡು 7.65 ಎಂ.ಎಂ. ನಾಡ ಪಿಸ್ತೂಲುಗಳಿಂದ ಐದು ಗುಂಡುಗಳನ್ನು ಹಾರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ನಡೆದ ಈ ಎರಡೂ ಪ್ರಕರಣಗಳಲ್ಲಿ ಇಬ್ಬರು ಹಂತಕರು ಬೆಳಗ್ಗೆ ಮೋಟರ್‌ಸೈಕಲ್‌ಗಳಲ್ಲಿ ಬಂದು ಬಲಿಪಶುಗಳನ್ನು ಅವರ ಮನೆಯ ಹೊರಗಡೆ ಗುಂಡು ಹಾರಿಸಿ ಕೊಂದಿದ್ದರು. ಗುಂಡಿನ ದಾಳಿಯಲ್ಲಿ ಪನ್ಸಾರೆ ಇಹಲೋಕ ತ್ಯಜಿಸಿದರೆ, ಅವರ ಪತ್ನಿ ಚೇತರಿಸಿಕೊಂಡಿದ್ದರು.

ಇಬ್ಬರು ಹಂತಕರು ಕಲಬುರ್ಗಿಯವರನ್ನು ಹತ್ಯೆ ಮಾಡಿದ್ದು ಆಗಸ್ಟ್ 30ರಂದು ಮುಂಜಾನೆ ಧಾರವಾಡದ ಅವರ ಮನೆಯಲ್ಲಿ. ಹಂತಕರು ಮೋಟರ್‌ಸೈಕಲ್‌ನಲ್ಲಿ ಬಂದು 7.65 ಎಂ.ಎಂ. ನಾಡ ಪಿಸ್ತೂಲಿನಿಂದ ಅವರ ತಲೆಗೆ ಎರಡು ಗುಂಡುಗಳನ್ನು ಹಾರಿಸಿದ್ದರು.

ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿರುವ ಕೆಲವು ನಂಬಿಕೆಗಳು ಹಾಗೂ ಆಚಾರಗಳನ್ನು ಗಟ್ಟಿ ದನಿಯಲ್ಲಿ ಪ್ರಶ್ನಿಸುವ ಈ ವಿಚಾರವಾದಿಗಳ ನಿಲುವಿನಿಂದ ಆಕ್ರೋಶಿತಗೊಂಡಿರಬಹುದಾದ ಬಲಪಂಥೀಯ ಗುಂಪೊಂದರ ಕೈವಾಡ ಈ ಹತ್ಯೆಗಳಲ್ಲಿ ಇರಬಹುದೆಂದು ತುಂಬಾ ಹಿಂದಿನಿಂದಲೂ ಶಂಕಿಸಲಾಗಿತ್ತಾದರೂ ಅದನ್ನು ಸಾಬೀತುಪಡಿಸುವ ಪುರಾವೆಗಳು ಪತ್ತೆಯಾಗಿಲ್ಲ.

ಈಗ ಅಪರಾಧ ಸ್ಥಳಗಳಿಂದ ಪಡೆದುಕೊಂಡಿರುವ ಕಾರ್ಟ್ರಿಜ್‌ಗಳ ಫೋರೆನ್ಸಿಕ್ ವಿಶ್ಲೇಷಣೆಯಲ್ಲಿ, ಕಲಬುರ್ಗಿ, ಪನ್ಸಾರೆ ಮತ್ತು ದಾಭೋಲ್ಕರ್ ಹತ್ಯೆಗಳಲ್ಲಿ ಬಳಸಲಾದ ಶಸ್ತ್ರಗಳ ನಡುವೆ ಸಾಮ್ಯತೆಯಿರುವುದು ಬೆಳಕಿಗೆ ಬಂದಿದೆ.

‘‘ಕಲಬುರ್ಗಿ ಮತ್ತು ಪನ್ಸಾರೆ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಕಾರ್ಟ್ರಿಜ್‌ಗಳು ನಿಕಟ ಹೋಲಿಕೆಯನ್ನು ಹೊಂದಿವೆ. ಈ ಮೂರೂ ಪ್ರಕರಣಗಳ ನಡುವೆ ಹತ್ಯೆ ನಡೆಸಿದ ವಿಧಾನ ಮತ್ತು ಕಾರ್ಟ್ರಿಜ್‌ಗಳ ಆಧಾರದಲ್ಲಿ ಸಾಮ್ಯತೆಗಳಿವೆ. ಆದರೆ ಹಂತಕರನ್ನು ಗುರುತಿಸಲು ಇವಿಷ್ಟೇ ಸಾಕಾಗುವುದಿಲ್ಲ’’ ಎಂದು ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

Write A Comment