ತುಮಕೂರು,ಡಿ.12: ರಾಗಿ ಹುಲ್ಲು ಕಟ್ಟಲು ಹೊಲಕ್ಕೆ ತರಳುತ್ತಿದ್ದ ಗುಂಪಿನ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡಿ ಓರ್ವನನ್ನು ತುಳಿದು ಸಾಯಿಸಿರುವ ಘಟನೆ ಗೂಳೂರು ಹೋಬಳಿ ಕಿತ್ತಗಾನಹಳ್ಳಿ-ಹೊನ್ನವಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಿತ್ತಗಾನಹಳ್ಳಿಯ ಕೆ.ಟಿ.ಬಸವರಾಜು (33)ಮೃತ ದುರ್ಧೈವಿ. ಗುರುವಾರ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಸಾವನದುರ್ಗ ಅರಣ್ಯದ ಮೂಲಕ ಜಿಲ್ಲೆ ಪ್ರವೇಶಿಸಿದ್ದ ನಾಲ್ಕು ಆನೆಗಳ ಹಿಂಡು ಕಿತ್ತಗಾನಹಳ್ಳಿ ಅರಣ್ಯದಲ್ಲಿ ಬೀಡುಬಿಟ್ಟಿದ್ದವು. ಆನೆ ಬಂದ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟು ಆನೆಗಳಿಂದ ದೂರ ವಿರುವಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೆ ಆನೆಗಳನ್ನು ನೋಡಲು ಸುತ್ತಮುತ್ತಲ ಜನರ ಗುಂಪೊಂದು ಅರಣ್ಯ ಪ್ರದೇಶದ ಹತ್ತಿರಕ್ಕೆ ಹೋದಾಗ ಒಂದು ಆನೆ ಜನರ ಗುಂಪಿನತ್ತ ದಾಳಿ ಇಟ್ಟಿದೆ. ಇದರೀಂದ ಭಯಭೀತರಾದ ಜನರ ಗುಂಪು ಚಲ್ಲಾ ಪಿಲ್ಲಿಯಾಗಿ ಓಡಿ ಹೋಗಿದ್ದಾರೆ.
ಕಿತ್ತಗಾನಹಳ್ಳಿಯ ಕೆ.ಟಿ.ಬಸವರಾಜು ಗಿಡಗಳ ಬಳಿಗೆ ಓಡಿ ಹೋಗಿದ್ದನ್ನು ಕಂಡ ಆನೆ ಆತನನ್ನು ಹಿಂಬಾಲಿಸಿ ಕೊಂಡು ಹೋಗಿ ಕಾಲಿನಿಂದ ಹೊಸಕಿ ಹಾಕಿದೆ. ಮಧ್ಯಾಹ್ನ 2 ಗಂಟೆವರೆಗೆ ಬಸವರಾಜು ಸಾವನ್ನಪ್ಪಿರುವುದು ಗ್ರಾಮದ ಜನರಿಗೆ ತಿಳಿದಿರಲಿಲ್ಲ. ಇವರ ಜೊತೆ ಹೋದವರು ನಮ್ಮಂತೆ ಆತನು ತಪ್ಪಿಸಿಕೊಂಡು ಬೇರೆ ಕಡೆಗೆ ಓಡಿ ಹೋಗಿದ್ದಾನೆ ಎಂದು ತಿಳಿದಿದ್ದರು.
ಆದರೆ ನಾಯಿಯೊಂದು ಮಾಂಸ ಕಚ್ಚಿಕೊಂಡು ಅರಣ್ಯ ಪ್ರದೇಶದಿಂದ ಹೊರಬಂದಿದ್ದನ್ನು ನೋಡಿದ ಜನರು ಅರಣ್ಯದೊಳಗೆ ಹೋಗಿ ನೋಡಿದಾಗ ಬಸವರಾಜು ಮೃತಪಟ್ಟಿರುವುದು ತಿಳಿದುಬಂದಿದೆ. ಪ್ರತಿಭಟನೆ: ಕಿತ್ತಗಾನಹಳ್ಳಿ ಮತ್ತು ಹೊನ್ನೇನಹಳ್ಳಿ ಗ್ರಾಮದ ಜನರು ಅರಣ್ಯ ಪ್ರದೇಶದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.ಗ್ರಾಮದ ಸುತ್ತಮುತ್ತ ದೊಡ್ಡ ಗಿಡಗಂಟೆಗಳು ಬೆಳೆದು ಕಾಡು ಪ್ರಾಣಿಗಳು ಬಂದರೂ ಕಾಣದಂತಹ ಸ್ಥಿತಿಯಿದೆ. ಅನಾವಶ್ಯಕ ಗಿಡಗಂಟೆಗಳನ್ನು ತೆಗೆಸುವಂತೆ ಹಾಗೂ ಮೃತ ಬಸವರಾಜು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕುಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಕಾರಿ ಅಮರನಾಥ್,ಐದು ಲಕ್ಷ ರೂ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿ,ಸ್ಥಳದಲ್ಲೇ ಎರಡು ಲಕ್ಷ ರೂ.ಚೆಕ್‌ನ್ನು ವಿತರಿಸಿದರು.ಜಿಲ್ಲೆಗೆ ಕಾಡಾನೆ ಬರದಂತೆ ಮುಂದಿನ ಮೂರ್ನಾಕಲ್ಕು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ. ಈಗಾಗಲೇ ಬನ್ನೇರುಘಟ್ಟದಿಂದ ಆನೆಗಳು ಹೊರ ಬರದಂತೆ ದೊಡ್ಡ ಕಂದಕ ತೋಡುವ ಕೆಲಸ ಮುಕ್ತಾಯ ಹಂತದಲ್ಲಿದೆ.ಅಲ್ಲದೆ ಆನೆ ಆವಾಸ ಸ್ಥಾನದ ಸುತ್ತ ಸೋಲಾರ್ ತಂತಿ ಬೇಲಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಮುಕ್ತಾಯಗೊಂಡರೆ ಆನೆಗಳು ಉಪಟಳ ಶಾಶ್ವತವಾಗಿ ತಪ್ಪಲಿದೆ ಎಂದರು. ನಾಡಿಗೆ ಬಂದಿರುವ ಕಾಡಾನೆಗಳನ್ನು ಪುನಃ ಜಿಲ್ಲೆಯಿಂದ ಬನ್ನೇರುಘಟ್ಟ ಆರಣ್ಯ ಪ್ರದೇಶಕ್ಕೆ ಅಟ್ಟಲು ಆರ್.ಎಫ್.ಓ ನರಸಿಂಹಮೂರ್ತಿ ಮತ್ತು ಸಿಬ್ಬಂದಿ ಸಿದ್ದತೆ ಕೈಗೊಂಡಿದ್ದಾರೆ.