ಕರ್ನಾಟಕ

ಬೇಬಿ ಕೊಲೆ ಪ್ರಕರಣ: 17 ಮಂದಿ ಬಂಧನ

Pinterest LinkedIn Tumblr

ar

ಬೆಂಗಳೂರು: ಹುಳಿಮಾವು ಸಮೀಪದ ವೈಶ್ಯ ಬ್ಯಾಂಕ್ ಕಾಲೊನಿಯಲ್ಲಿ ಡಿ.1ರಂದು ಶಿವಕೆಂಪೇಗೌಡ ಅಲಿಯಾಸ್ ಬೇಬಿ(22) ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ 17 ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಉಮೇಶ್ ಅಲಿಯಾಸ್ ಮೇಸ್ತ್ರಿ, ರಾಕೇಶ್, ಪೂರ್ಣಚಂದ್ರ, ಮದನ್, ಅಭಿಷೇಕ್, ಮೋಹನ್, ಮುತ್ತುರಾಜ್, ಮನೋಜ್, ಹರೀಶ್, ಅರ್ಜುನ್, ಶಶಾಂಕ್, ಸಾಯಿತೇಜ, ಕಿರಣ್, ಜೀವ, ಮಣಿಕಂಠ, ಗಣೇಶ ಹಾಗೂ ಪ್ರತಾಪ್ ಎಂಬುವರನ್ನು ಬಂಧಿಸಲಾಗಿದೆ. ಇವರೆಲ್ಲ 19 ರಿಂದ 24ರ ವಯೋಮಾನದ ವರಾಗಿದ್ದು, ಹುಳಿಮಾವು ಸುತ್ತಮುತ್ತ ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೋಣನಕುಂಟೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬೇಬಿ, ಡಿ.1ರ ಸಂಜೆ 6.30ರ ಸುಮಾರಿಗೆ ಸ್ನೇಹಿತ ಕಿರಣ್‌ ಜತೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ. ಚುಂಚಘಟ್ಟ ಮುಖ್ಯರಸ್ತೆಯಲ್ಲಿ ಬೈಕನ್ನು ಅಡ್ಡಗಟ್ಟಿದ್ದ ಉಮೇಶ್ ಹಾಗೂ ಆತನ ಸಹಚರರು, ಕಿರಣ್‌ನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದರು.

ನಂತರ ಬೇಬಿಯನ್ನು ಆಟೊದಲ್ಲಿ ಅಪಹರಿಸಿ, ವೈಶ್ಯ ಬ್ಯಾಂಕ್ ಕಾಲೊನಿಗೆ ಎಳೆದೊಯ್ದಿದ್ದರು. ಅವರಿಂದ ತಪ್ಪಿಸಿಕೊಂಡು ಮೈದಾನದ ಒಳಗೆ ಓಡಿದ್ದ ಬೇಬಿಯನ್ನು ಅಲ್ಲೇ ಮಚ್ಚು–ಲಾಂಗು, ಸಲಾಕೆ, ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕಿರಣ್ ಹುಳಿಮಾವು ಪೊಲೀಸರಿಗೆ ದೂರು ಕೊಟ್ಟಿದ್ದ.

ಸದಾ ಗುದ್ದಾಟ: ಹುಳಿಮಾವು ಪ್ರದೇಶದಲ್ಲಿ ಬೇಬಿ ಹಾಗೂ ಆರೋಪಿ ಉಮೇಶ್ ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡು ರೌಡಿ ಚಟುವಟಿಕೆಯಲ್ಲಿ ತೊಡಗಿದ್ದರು. ಒಂದೂವರೆ ವರ್ಷದ ಹಿಂದೆ ಬೇಬಿಯ ಸಹಚರರು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಗಣೇಶ್ ಅಲಿಯಾಸ್ ಅಡ್ಡಿ ಗಣಿಯನ್ನು ಕೊಂದಿದ್ದರು. ಈ ಘಟನೆ ನಂತರ ಉಮೇಶ್ ಗ್ಯಾಂಗ್ ತಣ್ಣಗಾಗಿತ್ತು. ಇತ್ತೀಚೆಗೆ ಬೇಬಿಯು ಎದುರಾಳಿ ಗ್ಯಾಂಗ್‌ನ ಮೇಲೆ ದಬ್ಬಾಳಿಕೆ ಮಾಡಲು ಆರಂಭಿಸಿದ್ದ. ಇದರಿಂದ ಕೆರಳಿದ್ದ ಉಮೇಶ್, ಸಹಚರರ ಜತೆ ಸೇರಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

Write A Comment