ಕರ್ನಾಟಕ

ದುರ್ವಾಸನೆ ತಾಳದೆ ಕಸದ ಲಾರಿಗೆ ಬೆಂಕಿ?

Pinterest LinkedIn Tumblr

fire

ಬೆಂಗಳೂರು: ಸುಮನಹಳ್ಳಿ ಜಂಕ್ಷನ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬಿಬಿಎಂಪಿಯ ಕಸದ ಲಾರಿಗೆ ಯಾರೋ ಬೆಂಕಿ ಹಚ್ಚಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕಸದ ದುರ್ವಾಸನೆ ತಾಳಲಾರದೆ ಸ್ಥಳೀಯರೇ ಲಾರಿಗೆ ಬೆಂಕಿ ಹಚ್ಚಿದ್ದಾರೆಂದು ಪಾಲಿಕೆ ಅಧಿಕಾರಿಗಳು ಆರೋಪಿಸಿದ್ದಾರೆ.

ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಕಸದ ಲಾರಿಗೆ ಬೆಂಕಿ ಬಿದ್ದಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಠಾಣೆಗೆ ಕರೆ ಮಾಡಿದರು. ಕೂಡಲೇ ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕಳುಹಿಸಿ ಬೆಂಕಿ ನಂದಿಸಲಾಯಿತು. ಘಟನಾ ಸ್ಥಳದಲ್ಲಿ ಯಾವುದೇ ಸಿ.ಸಿ ಟಿ.ವಿ ಕ್ಯಾಮೆರಾಗಳಿಲ್ಲ. ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದರು.

ಸ್ಥಳೀಯರಿಂದ ಬೆಂಕಿ: ‘ಸುಮನಹಳ್ಳಿ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ಅನಧಿಕೃತವಾಗಿ ಕಸ ಸುರಿಯುತ್ತಿದ್ದ ಮೂರು ಲಾರಿಗಳನ್ನು ಜಪ್ತಿ ಮಾಡಿ, ರಸ್ತೆ ಬದಿಯೇ ನಿಲ್ಲಿಸಲಾಗಿತ್ತು. ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ಕಸದ ದುರ್ವಾಸನೆ ತಾಳಲಾರದೆ ಒಂದು ಲಾರಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ವೀರಭದ್ರಪ್ಪ ತಿಳಿಸಿದ್ದಾರೆ.

‘ಹೊಸದಾಗಿ ಪ್ರಾರಂಭಿಸಿರುವ ಕನ್ನಹಳ್ಳಿ, ಸೀಗೆಹಳ್ಳಿ ಹಾಗೂ ದೊಡ್ಡಬಿದರಕಲ್ಲು ಕಸ ಸಂಸ್ಕರಣಾ ಘಟಕಗಳಲ್ಲಿ ವಿಂಗಡಿಸಿದ ಕಸವನ್ನಷ್ಟೇ ತೆಗೆದುಕೊಳ್ಳುವಂತೆ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಕಸ ವಿಂಗಡಣೆಗೆ ಒತ್ತು ಕೊಡದ ಗುತ್ತಿಗೆದಾರರು, ಮಿಶ್ರಿತ ಕಸವನ್ನು ರಾತ್ರಿ ವೇಳೆ ಖಾಸಗಿ ಲಾರಿಗಳ ಮೂಲಕ ರಸ್ತೆ ಬದಿ ಸುರಿಯುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆಯ ಪ್ರಹರಿ ವಾಹನಗಳಲ್ಲಿ ಗಸ್ತು ತಿರುಗಲಾಗುತ್ತಿದೆ.

‘ಖಾಸಗಿ ಲಾರಿಗಳ ಮೂಲಕ ಮೈಸೂರು ರಸ್ತೆ, ನಾಯಂಡಹಳ್ಳಿ, ಕನಕಪುರ ರಸ್ತೆ ಮುಂತಾದ ಕಡೆ ಕಸ ಸುರಿಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಈ ಹಿಂದೆಯೂ ಕೊಟ್ಟಿಗೆಪಾಳ್ಯದಲ್ಲಿ ಕಸ ಸುರಿಯುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲಾಗಿತ್ತು.

‘ಶುಕ್ರವಾರ ರಾತ್ರಿ ಗಸ್ತಿನಲ್ಲಿದ್ದಾಗ ಗಂಗಮ್ಮದೇವಿ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಮೂರು ಲಾರಿಗಳು (ಕೆಎ-28 ಬಿ 3237), (ಕೆಎ-04 ಬಿ 9879) ಹಾಗೂ ಕೆಎ–08 ಬಿ 3435) ಸುಮನಹಳ್ಳಿ ಜಂಕ್ಷನ್ ಬಳಿ ಕಸ ಸುರಿಯಲು ಮುಂದಾಗಿದ್ದವು. ಆಗ ಲಾರಿಗಳನ್ನು ಜಪ್ತಿ ಮಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಸದ್ಯ ಆ ಟ್ರಾನ್ಸ್‌ಪೋರ್ಟ್‌ನ ಮಾಲೀಕರು ತಲೆಮರೆಸಿಕೊಂಡಿದ್ದಾರೆ’ ಎಂದು ವೀರಭದ್ರಪ್ಪ ಹೇಳಿದ್ದಾರೆ.

Write A Comment