ಕರ್ನಾಟಕ

ಯತ್ನಾಳ್ ನಾನು ಹೇಳಿದ್ದ ಬಿದ್ಧಿಮಾತಿಗೆ ಬೆಲೆ ಕೊಟ್ಟಿಲ್ಲ : ಯಡಿಯೂರಪ್ಪ

Pinterest LinkedIn Tumblr

yaddi

ಹುಬ್ಬಳ್ಳಿ,ಡಿ.13: ಪಕ್ಷದ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚುನಾವಣೆಗೆ ನಿಲ್ಲದಂತೆ ಫೋನ್ ಮಾಡಿ ಬುದ್ದಿವಾದ ಹೇಳಿದ್ದೆ. ಆದರೂ ಬುದ್ದಿ ಮಾತಿಗೆ ಅವರು ಬೆಲೆ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿ ಯತ್ನಾಳ್ ವರ್ತನೆ ಬಗ್ಗೆ ತೃಪ್ತಿ ಇರಲಿಲ್ಲ. ನನಗೂ ಅಸಮಾಧಾನವಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಇನ್ನು ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಬೇಕು ಎಂದು ಯತ್ನಾಳ್ ಮಾತನಾಡಿದ್ದಕ್ಕೂ ಅವರ ಉಚ್ಛಾಟನೆಗೂ ಯಾವುದೇ ಸಂಬಂಧವಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕೆ ಅವರ ಉಚ್ಛಾಟನೆಯಾಗಿದೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಕೆಜೆಪಿ ಹಾಗೂ ಬಿಜೆಪಿ ಬಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿ ಬಿಜೆಪಿ, ಕೆಜೆಪಿ ಎನ್ನುವ ವ್ಯತ್ಯಾಸಗಳಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದರು.

ಇನ್ನು ರಾಜ್ಯದಲ್ಲಿ ಜನತಾಪರಿವಾರ ಒಟ್ಟುಗೂಡುವುದರ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪನವರು ರಾಜ್ಯದಲ್ಲಿ ಜನತಾಪರಿವಾರದ ಅಸ್ತಿತ್ವವೇ ಇಲ್ಲ ಎಂದು ಕುಟುಕಿದರು. ಅವಿಭಜಿತ ಧಾರವಾಡ ಜಿಲ್ಲೆಯ ವಿಧಾನಪರಿಷತ್ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಅವರು ಯಡಿಯೂರಪ್ಪ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಅದು ಒಂದು ಸಾರಿ ಅಲ್ಲ , ಎರಡೆರಡು ಬಾರಿ ಕಾಲಿಗೆ ಎರಗಿ ಆಶೀರ್ವಾದ ಪಡೆದರು.

ವೈಯಕ್ತಿಕ ಕಾರ್ಯಕ್ರಮದ ಅಂಗವಾಗಿ ದಾವಣಗೆರೆಗೆ ತೆರಳುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದರು. ವಿಷಯ ತಿಳಿದು ಅವರ ಭೇಟಿಗೆ ಆಗಮಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ತಾವೇ ಚುನಾವಣಾ ಅಭ್ಯರ್ಥಿ ಎಂದು ಪರಿಚಯಿಸಿಕೊಂಡಿದ್ದು ವಿಶೇಷ.

ಅಲ್ಲದೆ ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಆಶೀವರ್ದಿಸಬೇಕು ಎಂದು ಬಿಎಸ್‌ವೈ ಕಾಲಿಗೆ ಅವರು ನಮಸ್ಕರಿಸಿದರು. ಈ ಬಾರಿ ನಿಮ್ಮ ಮೇಲೆ ಅನುಕಂಪವಿದೆ. ಗೆದ್ದು ಬರ್ತೀ ರಿ ಬಿಡಿ ಎಂದು ಬಿ.ಎಸ್.ಯಡಿಯೂರಪ್ಪ ಅವರು ಪ್ರದೀಪ್ ಶೆಟ್ಟರ್ ಅವರನ್ನು ಆಶೀರ್ವದಿಸಿದರು.

Write A Comment