ಕರ್ನಾಟಕ

‘ನಾನು ಮೊಬೈಲ್ ಇಟ್ಟುಕೊಳ್ಳುವುದನ್ನೇ ಬಿಟ್ಟಿದ್ದೇನೆ’ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

Siddaramaiah

ಬೆಂಗಳೂರು, ಡಿ.13: ಮೊಬೈಲ್ ಇಟ್ಟುಕೊಂಡರೆ ರಾತ್ರಿಯೆಲ್ಲಾ ಫೋನ್ ಮಾಡಿ ಕಿರಿಕಿರಿ ಮಾಡುತ್ತಾರೆ. ಹಾಗಾಗಿ ಮೊಬೈಲ್ ಇಟ್ಟುಕೊಳ್ಳುವುದೇ ಬಿಟ್ಟಿದ್ದೇನೆ. ನನ್ನ ಮೊಬೈಲ್ ನೋಡಿಕೊಳ್ಳುವ ಜವಾಬ್ದಾರಿ ಬೇರೆಯವರಿಗೆ ವಹಿಸಿದ್ದು, ಅವರಿಂದ ಸುದ್ದಿ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಏರ್ಪಡಿಸಿದ್ದ ಡಿಜಿಟಲ್ ಕನ್ನಡ ಅಂತರ್ಜಾಲ ಸುದ್ದಿ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಂದು ಸ್ಮಾರ್ಟ್‌ಫೋನ್‌ಗಳಿಂದ ಸುದ್ದಿ ತಲುಪಿಸುವ ಶೈಲಿ ಬದಲಾಗಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ ಎಂದರು. ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳು ವ್ಯಾಪಕವಾಗಿವೆ. ಆದರೆ ನಾನಿನ್ನು ಅದಕ್ಕೆ ಹೊಂದಿಕೊಂಡಿಲ್ಲ. ಸ್ಮಾರ್ಟ್‌ಫೋನನ್ನು ಇಟ್ಟುಕೊಂಡಿಲ್ಲ. ಮುಖ್ಯಮಂತ್ರಿ ಕಚೇರಿಯ ಆಗುಹೋಗುಗಳನ್ನು ನನ್ನ ಸಿಬ್ಬಂದಿಗಳು ಸೋಷಿಯಲ್ ಮೀಡಿಯಾಗೆ ಹಾಕುತ್ತಾರೆ. ಫೋನ್ ಇಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ರಾತ್ರಿಯೆಲ್ಲಾ ಕರೆಗಳು ಬರುತ್ತವೆ ಎಂದು ಹೇಳಿದರು.

ಡಿಜಿಟಲ್ ಕನ್ನಡ ವೆಬ್‌ಸೈಟ್‌ನ ಸಂಪಾದಕ ತ್ಯಾಗರಾಜ್ ಅವರು ದಂಡಪಿಂಡಗಳು ಎಂದು ಹಿಂದಿನ ಸರ್ಕಾರದ ಸಚಿವರನ್ನು ಟೀಕೆ ಮಾಡಿದ್ದು, ಒಳಸುಳಿ ಚಾಟಿ-ಚಟಾಕಿ ಲೇಖನಗಳನ್ನು ಓದಿದ್ದೇನೆ. ಚಾಟಿ-ಚಟಾಕಿಯಲ್ಲಿ ನನ್ನ ಬಗ್ಗೆಯೂ ಪ್ರಸ್ತಾಪವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು ಎಂದು ನಾನು ಅವರ ವಿಮರ್ಶೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇನೆ ಎಂದರು. ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಈಗಿನ ಬಹುತೇಕ ರಾಜಕಾರಣಿಗಳು ಟ್ವೀಟರ್ ಅಕೌಂಟ್ ಹೊಂದಿದ್ದು, ಅದರಲ್ಲೇ ಪ್ರತಿಕ್ರಿಯಿಸುತ್ತಾರೆ. ನಾನೂ ಕೂಡ ಅಕೌಂಟ್ ಹೊಂದಲು ಮನಸ್ಸು ಮಾಡಿದ್ದೆ. ಆ ಸಂದರ್ಭದಲ್ಲಿ ದೇಶದ ಹಿರಿಯ ರಾಜಕಾರಣಿಯೊಬ್ಬರು ಪ್ರಸಕ್ತ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿದ್ದರು. ಅದಕ್ಕೆ ಸಾವಿರಾರು ಮಂದಿ ಟೀಕೆಗಳ ಮೂಲಕ ಮರು ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದನ್ನು ನೋಡಿ ಹೆದರಿದ ನಾನು ಟ್ವೀಟರ್ ಸಹವಾಸವೇ ಬೇಡವೆಂದು ಸುಮ್ಮನಾದೆ ಎಂದು ಹೇಳಿದರು.

ಸಾಕಷ್ಟು ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಪ್ರತಿಕ್ರಿಯಿಸುವುದಿಲ್ಲ. ಬದಲಾಗಿ ವಾರ್‌ರೂಮ್ ಕಟ್ಟಿಕೊಂಡಿರುತ್ತಾರೆ. ಅದರಲ್ಲಿ 10-15ಮಂದಿ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುತ್ತಾರೆ. ಬಿಹಾರದಲ್ಲಿ ಮಾಧ್ಯಮಗಳೇ ತಲುಪದ ಶೇ.40ರಷ್ಟು ಡಾರ್ಕ್ ಏರಿಯಾ ಇದ್ದರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನರ ತೀರ್ಪು ನೋಡಿದರೆ ಎಲ್ಳಾ ಮಾಧ್ಯಮಗಳಿಗಿಂತಲೂ ಮನುಷ್ಯಮೆದುಳು ಎಷ್ಟು ಶಕ್ತಿಶಾಲಿ ಎನಿಸುತ್ತದೆ ಎಂದು ಹೇಳಿದರು.

ಮನೆಯಲ್ಲಿ ಗಂಡ-ಹೆಂಡತಿ ಬಳಿ ಸ್ಮಾರ್ಟ್‌ಫೋನ್ ಇದ್ದರೆ ಸಂಸಾರದಲ್ಲಿ ಜಗಳವೇ ಇರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಾಣಿಜ್ಯೋದ್ಯಮಿಗಳು ಜಾಹೀರಾತಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಆದರೆ ಅದರಲ್ಲಿ ಶೇ.10ರಷ್ಟನ್ನು ಪ್ರಾದೇಶಿಕ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಮೀಸಲಿಡಬೇಕೆಂಬ ಕಾನೂನು ರೂಪಿಸಿದರೆ ಸಣ್ಣ ಪ್ರಮಾಣದ ಪತ್ರಿಕೆಗಳು ಮತ್ತು ಮಾಧ್ಯಮಗಳು ಆರ್ಥಿಕವಾಗಿ ಸಬಲಗೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಮೀಡಿಯಾ ಸಂಪಾದಕ ತ್ಯಾಗರಾಜ್, ಸಹ ಸಂಪಾದಕ ಚೈತನ್ಯ ಹೆಗಡೆ, ವಿಧಾನಪರಿಷತ್ ಸದಸ್ಯ ಶರವಣ, ಮತ್ತಿತರರು ಭಾಗವಹಿಸಿದ್ದರು.

Write A Comment