ಕರ್ನಾಟಕ

ಬರ ಪರಿಹಾರ ನೀಡಲು ಕೇಂದ್ರದ ಬಳಿ ಹಣ ಇಲ್ಲ : ಸಿದ್ದರಾಮಯ್ಯ ಟೀಕೆ

Pinterest LinkedIn Tumblr

sidduಬೆಂಗಳೂರು, ಡಿ.14- ರಾಜ್ಯದ ಬರ ಪರಿಹಾರಕ್ಕೆ ಆರ್ಥಿಕ ನೆರವು ನೀಡಲು ಕೇಂದ್ರದ ಬಳಿ ಹಣವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.  ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಸರ್ಕಾರದ ಹಿರಿಯ ಅಧಿಕಾರಿ ರಾಜ್‌ಕುಮಾರ್ ಕತ್ರಿ ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯಕ್ಕೆ ಹಣ ಬಿಡುಗಡೆ  ಮಾಡುವ ಬಗ್ಗೆ ಕೇಳಿದಾಗ,ಹಣಕಾಸು ಕೊರತೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಲಿರುವ ಹಣದಲ್ಲಿ ವಿಳಂಬವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಕೇಂದ್ರ ಸಚಿವ ಸದಾನಂದಗೌಡ ನಾಳೆಯೇ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.

ಸದಾನಂದಗೌಡರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದಕ್ಕಾಗಿ ಕೇಂದ್ರದ ಬಳಿಹೋಗಿ ಕೃಷಿ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ದೆಹಲಿಯಲ್ಲೇ ಇದ್ದಾರೆ. ಅವರೇ ಹಣ ಕೊಡಿಸಬೇಕೆಂದು ಹೇಳಿದ ಅವರು, ಬರಪರಿಹಾರಕ್ಕಾಗಿ 1540 ಕೋಟಿ ರೂ. ಹಣ ಮಂಜೂರಾಗಿದ್ದರೂ ಇದುವರೆಗೂ ಬಿಡುಗಡೆಯಾಗಿಲ್ಲ. ಸತ್ಯ ಹೇಳಿದರೆ ರಾಜಕೀಯ ಪ್ರೇರಿತ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ಹಣ ಮಂಜೂರಾಗಿ ಒಂದು ತಿಂಗಳಾದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾನೂನು ಮಿತಿಯಲ್ಲಿ ಸಾಲ : ರಾಜ್ಯ ಸರ್ಕಾರ ಕಾನೂನು ಮಿತಿಯಲ್ಲಿಯೇ ಸಾಲ ಮಾಡುತ್ತಿದೆ. ಆದರೆ, ಅದಕ್ಕಿಂತ ಹೆಚ್ಚು ಸಾಲ ಮಾಡಿಲ್ಲ. ರಾಜ್ಯ ಸರ್ಕಾರ  ಸಾಲ ಮಾಡುತ್ತಿರುವುದು ಇಂದು ನಿನ್ನೆಯದಲ್ಲ, ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೂ ಸರ್ಕಾರ ಕಾನೂನು ಮಿತಿ ದಾಟಿಲ್ಲವೆಂದು ಸ್ಪಷ್ಟಪಡಿಸಿದರು.

ಶೇ.25ರಷ್ಟು ಸಾಲ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ನಾವೂ ಕೂಡ ಆ ಮಿತಿಯಲ್ಲಿ ಸಾಲ ಮಾಡುತ್ತಿದ್ದೇವೆ. ಸಾಮಾಜಿಕ ಕಲ್ಯಾಣ ಕಾರ್ಯ ಹಾಗೂ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಸಾಲ ಪಡೆಯುವುದು ಅನಿವಾರ್ಯ. ಅಲ್ಲದೆ ಈ ಹಣವನ್ನು ಹೆಚ್ಚು-ಹೆಚ್ಚಾಗಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.  ಕಾಗೋಡು ತಿಮ್ಮಪ್ಪ ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಯಲ್ಲಿ ಶೇ.70ರಷ್ಟು ಈಡೇರಿಸಲಾಗಿದೆ. ಇನ್ನು ಎರಡು ವರ್ಷಕ್ಕೂ ಹೆಚ್ಚು ಕಾಲದ ಅವಕಾಶವಿದ್ದು, ಉಳಿದ ಭರವಸೆಯನ್ನು ಈ ಅವಧಿಯಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

Write A Comment