ಕರ್ನಾಟಕ

ಯಾವುದೇ ರೀತಿ ತನಿಖೆಗೆ ಸಿದ್ಧ ಸೋಮಣ್ಣಗೆ ಉಗ್ರಪ್ಪ ಸವಾಲ್

Pinterest LinkedIn Tumblr

ugraಬೆಂಗಳೂರು, ಡಿ.14- ಮಾಜಿ ಸಚಿವ ವಿ.ಸೋಮಣ್ಣ ಹಾಗೂ ತಮ್ಮ ಆಸ್ತಿಯನ್ನು ಸಿಬಿಐ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಸೇರಿದಂತೆ ಯಾವುದೇ ರೀತಿಯ ತನಿಖೆ ನಡೆಸಲಿ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೀಲರಕ್ಷಣೆ, ಅತ್ಯಾಚಾರ ನಿಯಂತ್ರಿಸುವ ವರದಿ ನೀಡಲು ರಚಿಸಲಾಗಿರುವ ತಜ್ಞರ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಇಂದಿಲ್ಲಿ ಸವಾಲು ಹಾಕಿದರು.

ಸೋಮಣ್ಣ ಅವರು ಜನತಾ ಬಜಾರ್‌ನ 4ನೇ ದರ್ಜೆ ಉದ್ಯೋಗಿಯಾಗಿ ಅಮಾನತುಗೊಂಡ ದಿನದಿಂದ ಇಲ್ಲಿಯವರೆಗೆ ಚೆನ್ನಾಗಿ ಬಲ್ಲೆ. ಅವರಿಗೆ ಬಂಗಲೆ, ಸಂಸ್ಥೆಗಳು, ಗಣಿಗಾರಿಕೆ ಎಲ್ಲಿಂದ ಬಂತು. ಎಲ್ಲಿ ತಿಂದು ಯಾರಿಗೆ ಒರೆಸಿದ್ದೀರಿ ಹೇಳಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಆದಾಯ ಮೀರಿದ್ದಕ್ಕಿಂತ ಹೆಚ್ಚು ಆಸ್ತಿ ತಮ್ಮಲ್ಲಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಹಾಗೂ ಸಾರ್ವಜನಿಕ ಜೀವನದಿಂದ ನಿವೃತ್ತಿಗೊಳ್ಳುವುದಾಗಿ ಸವಾಲು ಹಾಕಿದರು. ಸೋಮಣ್ಣ ಹಾಗೂ ಅವರು ಬೆಂಬಲಿಸುವ ಬಿಜೆಪಿ ನಾಯಕರು ಆಸ್ತಿಯ ತನಿಖೆಗೆ ಸಿದ್ಧವಿದ್ದಾರೆಯೇ ಎಂಬುದನ್ನು ಹೇಳಬೇಕು. ಗ್ರಾ.ಪಂ., ಅರಣ್ಯ ಇಲಾಖೆ,  ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಎಲ್ಲಾ ಕಡೆಯೂ ಗಣಿಗಾರಿಕೆಗೆ ಅವಕಾಶ ಬೇಡ ಎಂಬ ವರದಿ ನೀಡಿದ್ದರೂ ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಅವರು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.

ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದ ಹಿತ ಕಾಪಾಡಲು ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಕೇಂದ್ರದಿಂದ ಯಾವುದೇ ಸಹಾಯ, ಅನುದಾನ ಕಾರ್ಯಕ್ರಮ ರಾಜ್ಯಕ್ಕೆ ತರುವಲ್ಲಿ ಅವರು ಸಫಲರಾಗಿಲ್ಲ. ವಿಶೇಷವಾಗಿ ಸಂಪರ್ಕಿಸಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ ಮನಬಂದಂತೆ ಮಾತನಾಡುತ್ತಿದ್ದಾರೆ. ಅವರನ್ನು ಓಲಗದ ಮೂಲಕ ಸಂಪರ್ಕಿಸಿ ಸಹಾಯಹಸ್ತ ಕೋರಬೇಕಿತ್ತೆ ಎಂದರು.
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಬರ ಪರಿಹಾರದಲ್ಲಿ ಅವರ ಜವಾಬ್ದಾರಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿದ್ದಾಗ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸಿಗರು ಈ ಮಾತನ್ನು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ, ಮುಂದಿನ ವಿಧಾನ ಸಭಾ ಚುನಾವಣೆ ನಾಯಕತ್ವ ಯಾರು ವಹಿಸಬೇಕು ಎನ್ನುವ ಗುದ್ದಾಟ ಶುರುವಾಗಿದೆ. ಆಂತರಿಕ ಕಲಹ ನಡೆಯುತ್ತಿದೆ.

ಇದರಿಂದ ಹತಾಶರಾಗಿರುವ ಸೋಮಣ್ಣ ಅವರು ಆಡಿರುವ ಮಾತು ಬಿಜೆಪಿಯ ಹೀನ ಹಾಗೂ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

Write A Comment