ಕರ್ನಾಟಕ

ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೆ ದೂರು

Pinterest LinkedIn Tumblr

siddu-in-tention

ಬೆಂಗಳೂರು, ಡಿ.15: ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದರೂ ಕಾರ್ಯಕರ್ತರಿಗೆ ಅಧಿಕಾರ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಾಮೇಷ ಎಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಗಳಲ್ಲಿ ಕೆಲಸ ಮಾಡುವ ಹುಮ್ಮಸ್ಸು ನಮಗಿಲ್ಲದಂತಾಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಈ ಸಂಬಂಧ ಸಿಎಂ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಎರಡೂವರೆ ವರ್ಷವಾದರೂ ಕೆಳಹಂತದ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಅಧಿಕಾರ ನೀಡದೆ ಚುನಾವಣೆಗಳ ನೆಪಗಳನ್ನು ಹೇಳಿಕೊಂಡು ಮುಂದೂಡುತ್ತಾ ಬಂದಿದ್ದಾರೆ. ಈ ಬಗ್ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ನಮಗೆ ತೀವ್ರ ನಿರಾಶೆಯಾಗಿದೆ. ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ನಿಗಮ ಮಂಡಳಿ ನಿರ್ದೇಶಕ ಸದಸ್ಯರ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಕ್ಕೆ ಬಂದು ಎರಡು ವರ್ಷದ ನಂತರ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಿದ ಸರ್ಕಾರ 8 ತಿಂಗಳು ಕಳೆದರೂ ನಿಗಮ ಮಂಡಳಿಗಳಿಗೆ ಸದಸ್ಯ ನಿರ್ದೇಶಕರನ್ನು ನೇಮಕ ಮಾಡಿಲ್ಲ. ಸುಮಾರು 632 ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಪಟ್ಟಿ ಅಂತಿಮಗೊಳಿಸಲಾಗಿತ್ತು.

ಆದರೆ, ಪ್ರತಿ ಬಾರಿ ಚುನಾವಣೆ ನೆಪ ಹೇಳಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ಇನ್ನೇನು ನಿಗಮಮಂಡಳಿ ಸದಸ್ಯರ ನೇಮಕ ಪ್ರಕಟವಾಗಬೇಕು ಎನ್ನುವಷ್ಟರಲ್ಲಿ ವಿಧಾನ ಪರಿಷತ್ ಚುನಾವಣೆಯ ಅಧಿಸೂಚನೆ ಪ್ರಕಟವಾಯಿತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರ ಸಿಕ್ಕಲಿಲ್ಲ. ಮುಂಬರುವ ಜನವರಿ 9 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.

ಮತ್ತೆ ನಮಗೆ ಅಧಿಕಾರ ಸಿಗುವುದು ಗಗನ ಕುಸುಮವಾಗಲಿದೆ ಹೈಕಮಾಂಡ್ ವರಿಷ್ಠರು ಈ ಸಂಬಂಧ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿ ಅಧಿಕಾರ ಹಂಚಿಕೆ ಮಾಡಿಸಬೇಕು, ಇಲ್ಲದಿದ್ದರೆ ಕಾರ್ಯಕರ್ತರು ತೀವ್ರ ನಿರಾಶೆಗೊಳ್ಳಲಿದ್ದಾರೆ. ಪಕ್ಷದಿಂದ ವಿಮುಖರಾಗುತ್ತಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಒಂಭತ್ತು ವರ್ಷಗಳ ಕಾಲ ಅಧಿಕಾರ ರಹಿತವಾಗಿದ್ದ ಕಾಂಗ್ರೆಸ್ 2013ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೆ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ. ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಧಿಕಾರಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರ ಆಸೆಗೆ ತಣ್ಣಿರೆರಚಿದಂತಾಗಿದೆ. ನಿಗಮ ಮಂಡಳಿಗಳನ್ನು ನೇಮಕ ಮಾಡಿ 9 ತಿಂಗಳು ಕಳೆದರೂ ಸದಸ್ಯ, ನಿರ್ದೇಶಕರನ್ನು ನೇಮಕ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ.

Write A Comment