ಕರ್ನಾಟಕ

ಆಗದ ಪ್ರಗತಿ : ಅಧಿಕಾರಿಗಳಿಗೆ ಮಂಗಳಾರತಿ; ಕೈಲಾಗದಿದ್ದರೆ ಜಾಗ ಬಿಡಿ: ಸಿದ್ದು ಎಚ್ಚರಿಕೆ

Pinterest LinkedIn Tumblr

siddu

ಬೆಂಗಳೂರು, ಡಿ. 25: ಬಜೆಟ್‌ನಲ್ಲಿ ಒದಗಿಸಿರುವ ಅನುದಾನ ಬಳಕೆ ಮಾಡದ ಅಧಿಕಾರಿಗಳಿಗೆ ಮಂಗಳಾರತಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುದಾನ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಇಲಾಖೆಗಳ ಪ್ರಗತಿ ಕುಂಠಿತವಾಗಿರುವುದನ್ನು ಎತ್ತಿ ತೋರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯೋಜನೆಗಳ ಜಾರಿಗೆ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ. ನಿಗದಿಯಾಗಿರುವ ಹಣವನ್ನು ಸದುಪಯೋಗಪಡಿಸಿಕೊಂಡು ಯೋಜನೆಗಳ ಯಶಸ್ವಿಯಾಗಿ ಜಾರಿಗೊಳಿಸಲು ತೊಂದರೆಯಾದರೂ ಏನು? ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಅನುದಾನದ ಬಳಕೆ ಆಗಬೇಕು. ಇದಕ್ಕಾಗಿ ಮುಂದಿನ 4 ತಿಂಗಳಿಗೆ ಅನ್ವಯವಾಗುವಂತೆ ಕ್ರಿಯಾ ಯೋಜನೆಯನ್ನು ರೂಪಿಸುವಂತೆಯೂ ಅವರು ಸಭೆಯಲ್ಲಿ ಸೂಚನೆ ನೀಡಿದರು.

ಕ್ರಿಯಾ ಯೋಜನೆಯ ರಚನೆ ಹಾಗೂ ನಿಗಧಿತ ಗುರಿ ಸಾಧನೆಯ ಜವಾಬ್ದಾರಿಯನ್ನು ಮುಖ್ಯ ಕಾರ್ಯದರ್ಶಿಗಳು ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯುವಲ್ಲಿ ನಿಗಧಿತ ಗುರಿ ಸಾಧಿಸಿಲ್ಲದಿರುವ ಬಗ್ಗೆಯೂ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಲ್ಲಿ ಪ್ರಗತಿ ಕುಂಠಿತ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒದಗಿಸಲಾದ ಮಾಹಿತಿಯಂತೆ ವಿವಿಧ ಇಲಾಖೆಗಲ್ಲಿ ಪ್ರಗತಿ ಕುಂಠಿತವಾಗಿರುವುದು ಬೆಳಕಿಗೆ ಬಂದಿದೆ.

ದಾಖಲೆಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂ‌ಡಳಿಗೆ ಒದಗಿಸಲಾಗಿದ್ದ 1 ಸಾವಿರ ಕೋಟಿ ರೂ. ನಲ್ಲಿ ಇದೇ ನವೆಂಬರ್ ವರೆಗೆ ಕೇವಲ 32 ಕೋಟಿ ರೂ.ಗಳನ್ನು ವೆಚ್ಚ ಮಾ‌ಡಲಾಗಿದ್ದು, ಶೇ. 0.03 ಅನುದಾನ ವೆಚ್ಚವಾಗಿದೆ. ಹಾಗೆಯೇ ಪರಿಶಿಷ್ಠ ಜಾತಿ ಉಪ ಯೋಜನೆಗೆ ಒದಗಿಸಲಾದ 11 ಸಾವಿರದ 772 ಕೋಟಿ ರೂ.ಗಳ ಪೈಕಿ ಇದುವರೆಗೂ ಖರ್ಚಾಗಿರುವುದು 2 ಸಾವಿರದ 248 ಕೋಟಿ. ಈ ಇಲಾಖೆಯಲ್ಲಿ ಆಗಿರುವ ಪ್ರಗತಿ ಶೇ. 24 ರಷ್ಟು ಮಾತ್ರ. ಅಂಬೇಡ್ಕರ್ ನಿವಾಸ ಯೋಜನೆಗೆ ಮೀಸಲಿಟ್ಟ 450 ಕೋಟಿ ರೂ.ನಲ್ಲಿ ಒಂದು ರೂಪಾಯಿಯು ಖರ್ಚಾಗಿಲ್ಲ. ಇದು ಶೂನ್ಯ ಸಾಧನೆ.

ಕೃಷಿಕರ ಕಲ್ಯಾಣಕ್ಕಾಗಿ ಜಾರಿಯಾದ ಕೃಷಿ ಭಾಗ್ಯಕ್ಕೆ ಬಜೆಟ್‌ನಲ್ಲಿ ಒದಗಿಸಿರುವುದು 1 ಸಾವಿರ ಕೋಟಿ ರೂ. ಇದುವರೆಗೂ ಖರ್ಚಾಗಿರುವ 100 ಕೋಟಿ ಮಾತ್ರ. ಉಳಿದಂತೆ ಉದ್ಯೋಗ ಖಾತ್ರಿ ಯೋಜನೆಗೆ ಒದಗಿಸಿದ ಅನುದಾನ 1510 ಕೋಟಿ ರೂ. ಖರ್ಜಾಗಿರುವುದು 707 ಕೋಟಿ, ಗ್ರಾಮೀಣ ನೀರು ಸರಬರಾಜು ಯೋಜನೆಗೆ ಒದಗಿಸಿದ ಅನುದಾನ 1569 ಕೋಟಿ ರೂ. ಖರ್ಚಾಗಿರುವುದು 815 ಕೋಟಿ, ಗಿರಿಜನ ಉಪಯೋಜನೆಗೆ ಒದಗಿಸಿರುವ ಅನುದಾನ 4582, ಖರ್ಚಾಗಿರುವುದು 1324. ಮೇಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಇಲಾಖೆಗಳ ಪ್ರಗತಿ ಶೇ. 30ನ್ನು ದಾಟಿಲ್ಲ. ಉಳಿದ 4 ತಿಂಗಳಲ್ಲಿ ಶೇ. 70 ರಷ್ಟು ಪ್ರಗತಿ ಸಾಧಿಸಬೇಕಾಗುತ್ತದೆ.

Write A Comment