ಕರ್ನಾಟಕ

ಕಳ್ಳರ ಸೆರೆ ;  5.5 ಕೋಟಿ ಮೌಲ್ಯದ ಮಾಲು ವಶ

Pinterest LinkedIn Tumblr

kallaru

ಬೆಂಗಳೂರು: ಕೊಲೆ, ಸುಲಿಗೆ, ಮನೆಗಳವು, ವಾಹನಗಳವು, ಸರಗಳವು ಸೇರಿದಂತೆ 295 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಕೇಂದ್ರ ವಿಭಾಗದ ಪೊಲೀಸರು 265 ಆರೋಪಿಗಳನ್ನು ಬಂಧಿಸಿ 5 ಕೋಟಿ 42 ಲಕ್ಷ 85 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಜನವರಿಯಿಂದ ಇಲ್ಲಿಯವರೆಗೆ ಪತ್ತೆ ಮಾಡಿರುವ 195 ಪ್ರಕರಣಗಳಲ್ಲಿ 7 ಕೆಜಿ 147 ಗ್ರಾಂ ಚಿನ್ನ, 47 ಕೆಜಿ 743 ಗ್ರಾಂ ಬೆಳ್ಳಿ, 48 ಲಕ್ಷ 15 ಸಾವಿರ ನಗದು, 24 ಲಕ್ಷ 50 ಸಾವಿರ ಮೌಲ್ಯದ ವಜ್ರ, 22 ಕಾರು, 10 ಆಟೋ, 132 ಬೈಕ್, 132 ಮೊಬೈಲ್, 19 ಲ್ಯಾಪ್‌ಟಾಪ್ ಸೇರಿ 5 ಕೋಟಿ 42 ಲಕ್ಷ 85 ಸಾವಿರ ಮೌಲ್ಯದ ಮಾಲುಗಳನ್ನು ಕೇಂದ್ರ ವಲಯದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ತಿಳಿಸಿದ್ದಾರೆ.

ಈ ವರ್ಷದಲ್ಲಿ ಕೇಂದ್ರ ವಿಭಾಗದಲ್ಲಿ 6 ಕೋಟಿ 84 ಲಕ್ಷ 37 ಸಾವಿರ ಮೌಲ್ಯದ ಮಾಲುಗಳು ಕಳವಾಗಿದ್ದವು. ಅದರಲ್ಲಿ ಬಹುತೇಕ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. 19 ಸರ ಅಪಹರಣ, 37 ರಾಬರಿ, 40 ಕನ್ನಗಳವು, 164 ವಾಹನಗಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು.

ಅಶೋಕ ನಗರದಲ್ಲಿ 1 ಕೋಟಿ 7 ಲಕ್ಷ 87 ಸಾವಿರ ಮೌಲ್ಯದ ಅತಿ ಹೆಚ್ಚು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ 265 ಆರೋಪಿಗಳನ್ನು ವಿಚಾರಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಬ್ಬನ್‌ಪಾರ್ಕ್ ಪೊಲೀಸರು 26 ಲಕ್ಷ 54 ಸಾವಿರ, ವಿವೇಕನಗರ ಪೊಲೀಸರು 97 ಲಕ್ಷ 37 ಸಾವಿರ, ಹೈಗ್ರೌಂಡ್ ಪೊಲೀಸರು 92 ಲಕ್ಷ 60 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಮೇಘರಿಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಲ್ಸನ್ ಗಾರ್ಡನ್ ಪೊಲೀಸರು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲೇ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೆಆರ್ ನಗರದ ಸುಜಾತಳನ್ನು ಬಂಧಿಸಿ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಬ್ಬನ್‌ಪಾರ್ಕ್ ಪೊಲೀಸರು ನಗರ್ತಪೇಟೆಯ ಪಾರಿವಾಳ ಮಂಜನನ್ನು ಬಂಧಿಸಿ 7 ಪ್ರಕರಣಕ್ಕೆ ಸಂಬಂಧಿಸಿದ 12 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು. ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಡಿಸಿಪಿ ಸಂದೀಪ್ ಪಾಟೀಲ್ ಅವರಿದ್ದರು.

Write A Comment