ಕರ್ನಾಟಕ

ಶಾರದೆ ಸನ್ನಿಧಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್

Pinterest LinkedIn Tumblr

cm telengana

ಶೃಂಗೇರಿ: ತೆಲಂಗಾಣ ರಾಜ್ಯ ಅಭಿವೃದ್ಧಿ, ಲೋಕ ಕಲ್ಯಾಣಾರ್ಥ ಡಿ. 23 ರಿಂದ 27ರ ವರೆಗೆ ತೆಲಂಗಾಣದಲ್ಲಿ ಆಯುತಾ ಶತ ಚಂಡೀ ಮಹಾಯಾಗ ನಡೆಯಲಿದ್ದು, ಈ ಯಾಗದ ಪೂರ್ಣಾಹುತಿಗೆ ಶೃಂಗೇರಿ ಶ್ರೀಗಳನ್ನು ಆಹ್ವಾನಿಸಿರುವುದಾಗಿ ತೆಲಾಂಗಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ.

ಇಲ್ಲಿನ ಶ್ರೀ ಶಾರದಾ ಪೀಠಕ್ಕೆ ಬುಧವಾರ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಹಸ್ರ-ಚಂಡೀಯಾಗ ನಡೆಸಲಾಗಿತ್ತು. ನಂತರ ನೂತನ ತೆಲಾಂಗಣ ರಾಜ್ಯ ರಚನೆಯಾಗಿ, ಅಧಿಕಾರ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಚಂಡೀಯಾಗ ಆಯೋಜಿಸಲಾಗಿದೆ.

ತೆಲಂಗಾಣ ರಾಜ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಿರಲಿ. ಜನರು ಸುಖ ಶಾಂತಿ ನೆಮ್ಮದಿಯಿಂದ ಇರಬೇಕು. ಉತ್ತಮ ಆಡಳಿತ ಮುಂದುವರಿಯಬೇಕು ಎಂಬುದೇ ನನ್ನ ಅಭಿಲಾಷೆ ಎಂದು ತಿಳಿಸಿದರು. ಇದೊಂದು ಖಾಸಗಿ ಭೇಟಿಯಾಗಿದ್ದು, ಶಾರದಾಂಬೆ ದರ್ಶನ, ಶ್ರೀಗಳ ಭೇಟಿಗಾಗಿ ಬಂದಿದ್ದೇನೆ.

ಪೀಠದ ಬಗ್ಗೆ ಗೌರವ, ಇಲ್ಲಿನ ಶ್ರೀಗಳ ಬಗ್ಗೆ ಅನನ್ಯ ಭಕ್ತಿಯಿದೆ. ಶ್ರೀಗಳ ಮಾರ್ಗದರ್ಶನ, ಆಶೀರ್ವಾದ ನನಗೆ ಬೇಕು ಎಂದು ಹೇಳಿದರು. ಮಧ್ಯಾಹ್ನ ಶೃಂಗೇರಿಗೆ ಆಗಮಿಸಿದ ಕೆಸಿಆರ್‍ಗೆ ಛತ್ರ ಚಾಮರ, ವಾದ್ಯ, ಫಲಪುಷ್ಪಗಳೊಂದಿಗೆ ವಿಶೇಷ ಸ್ವಾಗತ ನೀಡಲಾಯಿತು. ನಂತರ ಶಾರದಾಂಬೆ ದರ್ಶನ ಪಡೆದ ಕೆಸಿಆರ್ ದಂಪತಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿ ನಂತರ ನರಸಿಂಹವನದಲ್ಲಿನ ಶ್ರೀ ಗುರುನಿವಾಸಕ್ಕೆ ತೆರಳಿ ಹಿರಿಯ ಜಗದ್ಗುರು ಭಾರತೀ ತೀರ್ಥರು,ಕಿರಿಯ ಶ್ರೀ ವಿಧುಶೇಖರ ಭಾರತೀ ಅವರಿಂದ ಆಶೀರ್ವಾದ ಪಡೆದರು. ಪತ್ನಿ ಶೋಭಾ ರಾಣಿ ಇದ್ದರು.

Write A Comment