ಕರ್ನಾಟಕ

ಅಕ್ರಮ ಮದ್ಯದ ಮಾರಾಟ ತಡೆಯಲು ಹೊಸ ಬಾರ್‌ಗಳಿಗೆ ಲೈಸೆನ್ಸ್..!

Pinterest LinkedIn Tumblr

siddufff

ಬಳ್ಳಾರಿ, ಡಿ.17- ಸಾರಾಯಿ ನಿಷೇಧದ ನಂತರ ಅಕ್ರಮ ಮದ್ಯದ ಮಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಹೊಸ ಪರವಾನಿಗೆ ವಿತರಣೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಳ್ಳಾರಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,  ಕಳೆದ 23 ವರ್ಷಗಳಿಂದ ಮದ್ಯದಂಗಡಿಗಳಿಗೆ ಲೈಸೆನ್ಸ್ ಕೊಟ್ಟಿಲ್ಲ. ಜನಸಂಖ್ಯೆ ಹೆಚ್ಚಾಗಿದೆ ಆದರೆ, ಮದ್ಯದಂಗಡಿ ಹೆಚ್ಚಾಗಿಲ್ಲ. ಸಾರಾಯಿ ನಿಷೇಧವಾಗಿದೆ. ಆದರೆ ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಹೊಸ ಮದ್ಯದಂಗಡಿಗೆ ಲೈಸೆನ್ಸ್ ನೀಡಲು ಚಿಂತನೆ ನಡೆಸಿದೆ. ಆದರೆ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.

ಬಂಡಾಯವೆದ್ದಿರುವ ಅಭ್ಯರ್ಥಿಗಳನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಿದ್ದೇವೆ. ಜನರ ಆಶೀರ್ವಾದ ಸರ್ಕಾರದ ಮೇಲಿದ್ದು , ಸ್ಪರ್ಧಿಸಿರುವ ಎಲ್ಲಾ 20 ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸ ಇದೆ ಎಂದರು.
ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಬದಲಾವಣೆ ತಂದಿದ್ದೇವೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಜನಪರ ಸರ್ಕಾರ ನಮ್ಮದು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟಿದ್ದೇನೆ. ಹೀಗಾಗಿ ಹೆಚ್ಚಿನ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಳ್ಳಾರಿಯಲ್ಲಿ ಕೆ.ಸಿ.ಕೊಂಡಯ್ಯ ಗೆಲ್ಲುತ್ತಾರೆ ಎಂದು ಭರವಸೆ ಇದೆ ಎಂದು ನುಡಿದರು.

ವಿಧಾನ ಪರಿಷತ್‌ನ ದ್ವಿಸದಸ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಒಟ್ಟು 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.  ಹೈದರಾಬಾದ್-ಕರ್ನಾಟಕಕ್ಕೆ ಒದಗಿಸಲಾಗಿರುವ ಅನುದಾನ ಖರ್ಚಾಗದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರು ಜಿಲ್ಲೆಗಳಲ್ಲಿನ 2,000 ಕೋಟಿ ರೂ. ಅನುದಾನ ಖರ್ಚಾಗಿಲ್ಲ. ಆದರೆ ಅದೇನು ವಾಪಸ್ ಹೋಗುವುದಿಲ್ಲ. 2014-15ನೆ ಸಾಲು ಪೂರ್ಣಗೊಂಡರೂ, 2015-16ರ ಸಾಲಿಗೂ ಈ ಅನುದಾನ ಬಳಕೆಯಾಗಲಿದೆ ಎಂದು ವಿವರಿಸಿದರು.

ಶಾಸಕರಿಗೆ ಈ ಅನುದಾನ ಬಳಸುವ ಅಧಿಕಾರವಿಲ್ಲ. ಹಾಗಾಗಿ ಅನುದಾನ ಖರ್ಚಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ವಿಮ್ಸ್ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ಅವಶ್ಯಕತೆ ಪೂರೈಸುವಂತೆಯೂ ಆದೇಶಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.

Write A Comment