ಕರ್ನಾಟಕ

ತಿಂಗಳಾಂತ್ಯಕ್ಕೆ ಕೌಶಿಕ್‌ಮುಖರ್ಜಿ ನಿವೃತ್ತಿ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆಗೆ ಪೈಪೋಟಿ

Pinterest LinkedIn Tumblr

koushik

ಬೆಂಗಳೂರು, ಡಿ.17- ಮಾಸಾಂತ್ಯಕ್ಕೆ ತೆರವಾಗುವ ರಾಜ್ಯ ಮುಖ್ಯಕಾರ್ಯದರ್ಶಿ ಹುದ್ದೆ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಹಿರಿಯ ಅಧಿಕಾರಿಗಳಲ್ಲಿ ಪೈಪೋಟಿ ಶುರುವಾಗಿದೆ.  ಮುಖ್ಯಕಾರ್ಯದರ್ಶಿಯಾಗಿರುವ ಕೌಶಿಕ್‌ಮುಖರ್ಜಿ ಈ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.  ಮುಖ್ಯಕಾರ್ಯದರ್ಶಿ ಹುದ್ದೆಯನ್ನು ಕನ್ನಡಿಗ ಅಧಿಕಾರಿಗೆ ನೀಡಬೇಕೆಂಬ ಬೇಡಿಕೆಯೂ ತೀವ್ರವಾಗಿದೆ.

ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ವಿ.ಉಮೇಶ್ ಅವರು ಕನ್ನಡಿಗರಾಗಿದ್ದು, ಅವರಿಗೆ ಸರ್ಕಾರ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಆದರೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಕೆ.ರತ್ನಪ್ರಭಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರ ಹೆಸರು ಸರ್ಕಾರದ ಮಟ್ಟದಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

2013ರಲ್ಲೇ ಎಸ್.ವಿ.ರಂಗನಾಥ್ ಅವರು ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದಾಗಲೇ ಕನ್ನಡಿಗರಾದ ಉಮೇಶ್ ಅವರಿಗೆ ನೀಡಬೇಕೆಂಬ ಒತ್ತಡ ಬಂದಿತ್ತು. ಆಗ ಕೌಶಿಕ್ ಮುಖರ್ಜಿ ಅವರನ್ನು ಸರ್ಕಾರ ಮುಖ್ಯಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿತ್ತು.

2013ರ ನವೆಂಬರ್‌ನಿಂದ ಕಳೆದ ಸೆಪ್ಟೆಂಬರ್ ಅಂತ್ಯದವರೆಗೆ ಅವರು ಮುಖ್ಯಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು. ಆ ನಂತರ ಮುಖ್ಯಕಾರ್ಯದರ್ಶಿ ಆಯ್ಕೆ ಬಗ್ಗೆ ಹಲವು ಅಧಿಕಾರಿಗಳ ಹೆಸರು ಕೇಳಿ ಬಂದರೂ ಅಂತಿಮವಾಗಿ ರಾಜ್ಯ ಸರ್ಕಾರ ಮೂರು ತಿಂಗಳ ಕಾಲ ಕೌಶಿಕ್ ಮುಖರ್ಜಿ ಅವರನ್ನೇ ಮುಂದುವರೆಸಿತ್ತು.

ಈಗ ಆ ಅವಧಿಯೂ ಮುಕ್ತಾಯವಾಗುತ್ತಿದ್ದು, ಹೊಸ ಮುಖ್ಯಕಾರ್ಯದರ್ಶಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿರುವ ಅರವಿಂದ್‌ಜಾಧವ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷರಾಗಿದ್ದು, ಮುಖ್ಯಕಾರ್ಯದರ್ಶಿ ಹುದ್ದೆ ಆಕಾಂಕ್ಷಿಯಲ್ಲ ಎಂಬ ಚರ್ಚೆ ಚಲಾವಣೆಯಲ್ಲಿ ಇದೆ.

ಇವರೂ ಕೂಡ ಜೂನ್ ಅಂತ್ಯಕ್ಕೆ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ. ಸೇವಾ ಹಿರಿತನದಲ್ಲಿ ಎರಡನೇ ಸ್ಥಾನದಲ್ಲಿರುವ ಡಾ.ಅನೂಪ್ ಕೆ.ಪೂಜಾರಿ ಅವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. ಜತೆಗೆ ಅವರು ಫೆಬ್ರುವರಿಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಾರೆ.

ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಮತ್ತೊಬ್ಬ ಉಪೇಂದ್ರ ತ್ರಿಪಾಠಿ ಅವರು  ಸೇವಾ ಹಿರಿತನದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಕೂಡ ಮುಂದಿನ ಅಕ್ಟೋಬರ್‌ಗೆ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿರುವ ಡಾ.ಸುಭಾಷ್‌ಚಂದ್ರ ಕುಂಟಿಯಾ ಅವರು ಕೇಂದ್ರ ಸರ್ಕರದ ಸೇವೆಯಲ್ಲಿದ್ದು, ಮುಖ್ಯಕಾರ್ಯದರ್ಶಿ ಹುದ್ದೆಗೆ ಆಕಾಂಕ್ಷಿಯಾಗಿಲ್ಲ ಎಂಬ ಅಭಿಪ್ರಾಯವೂ ಇದೆ.

ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳ್ಯಾರೂ ಕೂಡ ಮುಖ್ಯಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳಾಗಿಲ್ಲ. ಅವರನ್ನು ಹೊರತು ಪಡಿಸಿದರೆ ರಾಜ್ಯದ ಸೇವೆಯಲ್ಲಿರುವ ಹಿರಿಯ ಐಎಎಸ್ ಅಧಿಕಾರಿಗಳ ಪೈಕಿ ವಿ.ಉಮೇಶ್ ಅವರು ಮೊದಲಿಗರಾಗಿದ್ದಾರೆ.

ಆನಂತರ ರತ್ನಪ್ರಭಾ, ಪಟ್ನಾಯಕ್ ಅವರು ಸೇವಾ ಹಿರಿತನ ಹೊಂದಿದ್ದಾರೆ. ಆದರೂ ಸರ್ಕಾರ ಈ ಇಬ್ಬರಲ್ಲಿ ಒಬ್ಬರನ್ನು ಮುಖ್ಯಕಾರ್ಯದರ್ಶಿ ಹುದ್ದೆಗೆ ನೇಮಕ  ಮಾಡಲು ಉದ್ದೇಶಿಸಿದೆ.

ಈ ಇಬ್ಬರ ಸೇವಾವಧಿ ಕೂಡ ಎರಡು ವರ್ಷಗಳ ಕಾಲವಿದೆ. ಆದರೆ, ಉಮೇಶ್ ಅವರ ಸೇವಾವಧಿ ಕೇವಲ 5 ತಿಂಗಳು ಎಂಬ ಚರ್ಚೆಯೂ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.

ಈ ಹಿಂದೆ ಮಾಲತಿದಾಸ್ ಎಂಬ ಐಎಎಸ್ ಅಧಿಕಾರಿಯೂ ಮುಖ್ಯಕಾರ್ಯದರ್ಶಿಯಾಗಿ ಕೇವಲ ಮೂರು ತಿಂಗಳ ಕಾಲ ಸೇವೆ ಸಲ್ಲಿಸಿದ ನಿದರ್ಶನವಿದೆ. ಜೆ.ಅಲೆಕ್ಸಾಂಡರ್ ಅವರು ಸೇವಾ ಹಿರಿತನದಲ್ಲಿ ಕಿರಿಯರಾಗಿದ್ದರೂ ಕೂಡ ಅವರನ್ನು ರಾಜ್ಯ ಸರ್ಕಾರದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆಗೆ ಪರಿಗಣಿಸಿದ ಉದಾಹರಣೆಗಳಿವೆ.

ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿರುವ ಅರವಿಂದ್ ಜಾಧವ್ ಅವರು ಮುಖ್ಯಕಾರ್ಯದರ್ಶಿ ಹುದ್ದೆಯ ರೇಸಿನಲ್ಲಿ ಇಲ್ಲ. ಇನ್ನು ಕೇಂದ್ರ ಸೇವೆಯಲ್ಲಿರುವ ಅನೂಪ್ ಕೆ.ಪುಜಾರಿ, ಉಪೇಂದ್ರ ತ್ರಿಪಾಠಿ, ಸುಭಾಷ್ ಚಂದ್ರ ಕುಂಟಿಯಾ ಅವರು ಕೂಡ ಆಸಕ್ತಿ ತೋರುತ್ತಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈ ಬಾರಿಯೂ ಉಮೇಶ್ ಅವರಿಗೆ ಮುಖ್ಯಕಾರ್ಯದರ್ಶಿ ಹುದ್ದೆ ಕೈ ತಪ್ಪಿದರೆ ಸುಮಾರು 15 ವರ್ಷಗಳ ಕಾಲ ಕನ್ನಡಿಗರಿಗೆ ಆ ಹುದ್ದೆ ಭಾಗ್ಯ ದೊರೆಯುವುದಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.

ರಾಜ್ಯದ ಸೇವೆಯಲ್ಲಿರುವ ವಿ.ಉಮೇಶ್, ರತ್ನಪ್ರಭಾ ಹಾಗೂ ಪಟ್ನಾಯಕ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಲವು ಯಾರತ್ತ ವಾಲುತ್ತದೆ ಎಂಬುದನ್ನು ಕಾದು ನೋಡಬೇಕು.

Write A Comment