ಕರ್ನಾಟಕ

ಅಸಹಿಷ್ಣುತೆ ಹೆಸರಲ್ಲಿ ವೈರತ್ವ ವೈರತ್ವ ಹುಟ್ಟುಹಾಕಲಾಗುತ್ತಿದೆ : ನಿಡುಮಾಮಿಡಿ ಶ್ರೀ

Pinterest LinkedIn Tumblr

needu

ಬೆಂಗಳೂರು, ಡಿ.17- ಇತ್ತೀಚೆಗೆ ದೇಶವನ್ನು ಕಾಡುತ್ತಿರುವ ಅಸಹಿಷ್ಣುತೆಗೆ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಿತಾಸಕ್ತಿಯ ಕಾರಣಗಳಿವೆ. ಪ್ರಜ್ಞಾಪೂರ್ವಕವಾಗಿ ಅಸಹಿಷ್ಣುತೆ ಆಚರಿಸಲಾಗುತ್ತಿದೆ. ಧರ್ಮಾ-ಧರ್ಮ, ಜಾತೀ-ಜಾತಿಗಳ ನಡುವೆ ವೈರತ್ವ ಹುಟ್ಟುಹಾಕಲಾಗುತ್ತಿದೆ ಎಂದು ಶ್ರೀ ನಿಡುಮಾಮಿಡಿವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು. ನಗರದ ಗಾಂಧಿ ಭವನದಲ್ಲಿಂದು ದಲಿತ ಸಂಘರ್ಷ ಸಮಿತಿ ಡಾ.ಬಿ.ಆರ್.ಅಂಬೇಡ್ಕರ್ ಅವರ 59ನೇ ಪರಿನಿಬ್ಬಾಣ ದಿನ ಪ್ರಯುಕ್ತ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.  ಅಸಹಿಷ್ಣುತೆ ಎಂಬುದು ವೇದಗಳ  ಕಾಲದಿಂದಲೂ ಇದೆ. ಆ ಸಂದರ್ಭದಲ್ಲಿ ವೇಷ-ಭೂಷಣಗಳು ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಆರ್ಯರು ದ್ರಾವಿಡರನ್ನು ನಿಕೃಷ್ಟದಿಂದ ಕಾಣುತ್ತಿದ್ದರು. ಇವೆರಡೂ ಒಟ್ಟಿಗೆ ಇದ್ದಾಗ ಸಂಘರ್ಷ ಸಹಜವಾಗಿತ್ತು.

ಆದರೆ, ಇತ್ತೀಚಿಗಿನ ಅಸಹಿಷ್ಣುತೆಗೆ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಿತಾಸಕ್ತಿಯ ಕಾರಣಗಳಿವೆ ಎಂದು ಹೇಳಿದರು.
ದೇಶದಲ್ಲಿ ಶೇ.90ರಷ್ಟಿರುವವರ ಹಿತಾಸಕ್ತಿಯನ್ನು ಶೇ.10ರಷ್ಟಿರುವವರು ನಿರ್ಧರಿಸುತ್ತಾರೆ. ಶೇ.10ರಷ್ಟಿರುವವರ ರಕ್ಷಣೆಗೆ ಶೇ.90ರಷ್ಟಿರುವ ಮಂದಿ ನಿಂತಿದ್ದಾರೆ. ಇದು ಹೆಗ್ಗಳಿಕೆ ಮತ್ತು ವಿಪರ್ಯಾಸವಾಗಿದೆ ಎಂದು ತಿಳಿಸಿದರು.

ಶೇ.10ರಷ್ಟು ಜನರ ಸಂಸ್ಕೃತಿ, ಆಚಾರ-ವಿಚಾರ, ಹಿತಾಸಕ್ತಿಯೇ ದೇಶದ ಹಿತಾಸಕ್ತಿ, ಸರ್ವಾಭಿವೃದ್ಧಿ ಎಂಬಂತೆ ಬಿಂಭಿಸುವ ಪ್ರಯತ್ನ ನಡೆಯುತ್ತಿದೆ. ಈ ಜನರ ಏಕಮುಖ ಸಂಸ್ಕೃತಿಯನ್ನೇ ಒತ್ತಾಯಪೂರ್ವಕವಾಗಿ ಇತರರ ಮೇಲೂ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎರಡು ದಶಕಗಳ ಹಿಂದೆ ಆರಂಭವಾದ ಅಸಹಿಷ್ಣುತೆ ಪ್ರಕ್ರಿಯೆ ಈಗ ಅತಿರೇಕಕ್ಕೆ ಹೋಗಿದೆ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರು. ಜನ ಇದನ್ನು ನಂಬಿ ಮತ ಹಾಕಿದರು. ಈಗ ಹಣ-ಅಧಿಕಾರ ಇದೆ ಎಂದು ಮನಸೋಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಶಾಂತಿ ಕದಡಲಾಗುತ್ತಿದೆ. ಯಜಮಾನಿಕೆ ಸಂಸ್ಕೃತಿ ಹುಟ್ಟುಹಾಕಲಾಗುತ್ತಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಾವಿರಾರು ವರ್ಷಗಳ ಹಿಂದೆ ಶಾಸ್ತ್ರಗಳ ಮೂಲಕ ಶೋಷಣೆ ಮಾಡಿದ ಜನ ಈಗ ಶಸ್ತ್ರಗಳನ್ನು ಹಿಡಿದು ಹಿಂಸೆ ಆರಂಭಿಸಿದ್ದಾರೆ. ಮನುಷ್ಯ ಸಂಬಂಧಗಳನ್ನು ನಾಶ ಮಾಡುತ್ತಿದ್ದಾರೆ. ಬಹುಸಂಖ್ಯಾತ ಜನರು ಗುಲಾಮರಾಗಿಯೇ ಮುಂದುವರೆಯಬೇಕೆಂದು ಶೇ.10ರಷ್ಟು ಜನ ಬಯಸುತ್ತಿದ್ದಾರೆ. ಈ ಗುಲಾಮಗಿರಿಯನ್ನೇ ನಮ್ಮ ಸಮಾಜ ಕೂಡ ಒಪ್ಪಿಕೊಂಡುಬಿಟ್ಟಿರುವುದು ವಿಪರ್ಯಾಸ ಎಂದು ಹೇಳಿದರು. ನಾಯಕರೆನಿಸಿಕೊಂಡವರಿಂದಲೂ ಕೂಡ ದಾಸ್ಯ ಸಂಸ್ಕೃತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ವೈಧಿಕ ಧರ್ಮ ನಮಗೆ ಯಾವತ್ತೂ ಆದರ್ಶವಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಮಾತನಾಡಿ, ಅಸಹಿಷ್ಣುತೆ ಮೊದಲಿನಿಂದಲೂ ಇದೆ. ಆದರೆ, ಪ್ರಭುತ್ವವೇ ಇದನ್ನು ಪೋಷಣೆ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆ. ಇದರ ವಿರುದ್ಧ ಒಗ್ಗಟ್ಟು ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮನೋಹರ್ ಚಂದ್ರ, ಗುರುಪ್ರಸಾದ್ ಕೆರಗೋಡು, ಸಯ್ಯದ್ ಶಫೀವುಲ್ಲಾ, ಪಿ.ಎಂ.ಹನೀಫ್, ಸಿದ್ದಲಿಂಗಯ್ಯ, ಮರಿಯಪ್ಪ, ಶ್ರೀನಿವಾಸ್, ಮಹದೇವಪ್ಪ, ಶಿವರಾಂ ಮತ್ತಿತರರು ಪಾಲ್ಗೊಂಡಿದ್ದರು.

Write A Comment