ಕರ್ನಾಟಕ

ಕಬ್ಬನ್‍ನಲ್ಲಿ ತಾಸು ಹೆಚ್ಚಾದ್ರೆ ಪಾರ್ಕಿಂಗ್ ಕಾಸೂ ಹೆಚ್ಚಳ!

Pinterest LinkedIn Tumblr

cubbon-parkಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ವಾಹನ ನಿಲುಗಡೆ ಶುಲ್ಕವನ್ನು ಪರಿಷ್ಕರಿಸಲಾಗುತ್ತಿದೆ. ದ್ವಿಚಕ್ರ ಮತ್ತು ಕಾರುಗಳಿಗೆ ಶುಲ್ಕ ಹೆಚ್ಚಿಸಲಾಗುತ್ತಿದೆ.

ಮೊದಲ ಮೂರು ಗಂಟೆಗೆ ದ್ವಿಚಕ್ರ ವಾಹನಗಳಿಗೆ ರು.15 ಹಾಗೂ ಮೂರರಿಂದ 6ಗಂಟೆ ಅವಧಿಗೆ ರು.45 ಹಾಗೂ 6ಗಂಟೆಯ ನಂತರ ಪ್ರತಿ ಗಂಟೆಗೂ ರು.10 ಹೆಚ್ಚಿಸಲಾಗುತ್ತಿದೆ. ಹಾಗೆಯೇ 4 ಚಕ್ರ ವಾಹನಗಳಿಗೆ ಮೊದಲ ಮೂರು ಅವಧಿಗೆ ರು.25 ಹಾಗೂ 6ಗಂಟೆಗಳಿಗೆ ರು.50 ಹಾಗೂ ಪ್ರತಿ ಒಂದು ಗಂಟೆಗೆ ರು.10 ನೀಡಬೇಕಾಗುತ್ತದೆ.

ಮಿನಿ ಕ್ಯಾಬ್‍ಗಳಿಗೆ ಮೊದಲ ಮೂರು ಗಂಟೆಗಳಿಗೆ ರು.80 ಹಾಗೂ ಮೂರರ ನಂತರ ರು.160 ಮತ್ತು ಪ್ರತಿ ಗಂಟೆಗೆ ರು.20, ಮಿನಿ ಬಸ್ ಗಳಿಗೆ ಮೊದಲ ಮೂರುಗಂಟೆ ರು.80 ನಂತರದಲ್ಲಿ ರು.200 ಹಾಗೂ ಪ್ರತಿ ಗಂಟೆಗೆ ರು.40 ತೆರಬೇಕಾಗುತ್ತದೆ. ಜತೆಗೆ ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಮಾತ್ರ ಪಾರ್ಕಿಂಗ್‍ಗೆ ಅವಕಾಶ ನೀಡಲಾಗುತ್ತದೆ.

ಈವರೆಗೆ ವಾಹನ ಸವಾರರು ಕಬ್ಬನ್ ಪಾರ್ಕ್‍ನ ಪಾರ್ಕಿಂಗ್ ತಾಣಗ ಳಲ್ಲಿ ಬೆಳಗ್ಗೆ ವಾಹನ ನಿಲ್ಲಿಸಿ ಹೊರಟರೆ ಸಂಜೆಯವರೆಗೂ ಬರುತ್ತಿರಲಿಲ್ಲ. ವಾಹನಗಳ ನಿಲುಗಡೆಗೆ ನಿಗದಿತ ಸಮಯವನ್ನು ಗೊತ್ತುಪಡಿಸಿರಲಿಲ್ಲವಾದ್ದರಿಂದ ಕಬ್ಬನ್ ಉದ್ಯಾನದ ಸುತ್ತಮುತ್ತಲಿನ ಸಾಕಷ್ಟು ನೌಕರರು ಹಾಗೂ ಇತರೆ ಕೆಲಸಗಳ ನಿಮಿತ್ತ ವಾಹನಗಳಲ್ಲಿ ಬಂದವರು ದಿನಗಟ್ಟಲೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರು. ಕಡಿಮೆ ಶುಲ್ಕ ಹಾಗೂ ಸಮಯ ನಿಗದಿಯಿಲ್ಲದ ಕಾರಣ ಕಬ್ಬನ್ ಪಾರ್ಕ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿದ್ದವು. ಆದ್ದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿತ್ತು. ಜತೆಗೆ ಇಲಾಖೆಗೂ ಲಾಭವಿರಲಿಲ್ಲ. ಇದೀಗ

ದರ ಹೆಚ್ಚಿಸಿ ಸಮಯವನ್ನೂ ನಿಗದಿಪಡಿಸುವುದರಿಂದ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗುತ್ತಿದೆ. ವಾರ್ಷಿಕ ರು.45 ಲಕ್ಷಕ್ಕೆ ಪಾರ್ಕಿಂಗ್ ಟೆಂಡರ್ ಕರೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಮುರಗೋಡ ತಿಳಿಸಿದರು.

ಉದ್ಯಾನಕ್ಕೆ ಪ್ರತಿ ನಿತ್ಯ ಅಂದಾಜು 300 ದ್ವಿಚಕ್ರವಾಹನಗಳು ಹಾಗೂ 150-200 ಕಾರುಗಳು, 10ಮಿನಿ ಬಸ್‍ಗಳು, ಕ್ಯಾಬ್‍ಗಳು ಬರುತ್ತವೆ. ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಮಾತ್ರ ಪಾರ್ಕಿಂಗ್‍ಗೆ ಅವಕಾಶ ನೀಡಲಾಗಿದೆ. ಕಬ್ಬನ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಪರಿಣಾಮವಾಗಿ ಸಂಜೆ 7.30ರ ನಂತರ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂದು ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಜೆ 7ಗಂಟೆ ನಂತರ ವಾಹನ ನಿಲುಗಡೆ ನಿಷೇಧಿಸುವಂತೆ ಆಲೋಚಿಸಿದೆ.

Write A Comment