ಕರ್ನಾಟಕ

ವರ್ಗಾವಣೆ ಸಿಗದ ಹಿನ್ನೆಲೆಯಲ್ಲಿ ಹೆಡ್‌ಕಾನ್ಸ್‌ಟೆಬಲ್ ಆತ್ಮಹತ್ಯೆ

Pinterest LinkedIn Tumblr

hangg

ಮಂಡ್ಯ, ಡಿ.19: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗನನ್ನು ನೋಡಿಕೊಳ್ಳುವ ಸಲುವಾಗಿ ಕೆಆರ್ ಪೇಟೆಯಿಂದ ಮಂಡ್ಯಕ್ಕೆ ವರ್ಗಾವಣೆ ಮಾಡದ ಹಿನ್ನೆಲೆಯಲ್ಲಿ ನೊಂದ ಹೆಡ್‌ಕಾನ್ಸ್‌ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯದ ಅನ್ನಪೂರ್ಣೇಶ್ವರಿ ನಗರದ ನಿವಾಸಿ ಜಿ.ಡಿ.ಕುಮಾರ್ (45) ಆತ್ಮಹತ್ಯೆಗೆ ಶರಣಾದ ಹೆಡ್‌ಕಾನ್ಸ್‌ಟೆಬಲ್. 2013ರಿಂದ ಅಬಕಾರಿ ವಿಚಕ್ಷಣ ದಳದಲ್ಲಿ ಕೆಲಸ ನಿರ್ವಹಿಸಿದ್ದ ಕುಮಾರ್ ಸೆಪ್ಟೆಂಬರ್ ತಿಂಗಳಲ್ಲಿ ಪ್ರಮೋಷನ್ ಮೇಲೆ ಬಡ್ತಿ ಹೊಂದಿ ಕೆಆರ್ ಪೇಟೆ ಠಾಣೆಗೆ ವರ್ಗಾವಣೆಗೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ನನ್ನ ಸಾವಿಗೆ ಜಿಲ್ಲಾ ಎಸ್‌ಪಿ ಭೂಷಣ್ ಜಿ.ಬೊರಸೆ ಕಾರಣ.

ನನ್ನ ಮಗನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ನನ್ನನ್ನು ಮಂಡ್ಯಕ್ಕೆ ವರ್ಗಾವಣೆ ಮಾಡಲು ಹಲವಾರು ಬಾರಿ ಮನವಿ ಮಾಡಿದರೂ ಅವರು ವರ್ಗಾವಣೆ ಮಾಡಲಿಲ್ಲ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿನ ನಂತರ ಬರುವ ಹಣದಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸು ಎಂದು ಪತ್ನಿಗೆ ತಿಳಿಸಿದ್ದಾರೆ.

ಇವರ ಇಬ್ಬರು ಮಕ್ಕಳ ಪೈಕಿ ಪೃಥ್ವಿಕ್ (14) ಎಂಬಾತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಆದರೆ, ಇವರು ಕೆಆರ್ ಪೇಟೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಸರಿಯಾಗಿ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲವೆಂದು ಕುಮಾರ್ ನೊಂದಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೆ ಪೃಥ್ವಿಕ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಮಗನ ಕಡೆ ನಿಗಾ ವಹಿಸಲು ಆಗುತ್ತಿಲ್ಲವೆಂದು ಕುಮಾರ್ ಮರುಗುತ್ತಿದ್ದರು. ಗುರುವಾರ ರಾತ್ರಿಪಾಳಿ ಮುಗಿಸಿ ಮನೆಗೆ ಬಂದ ಕುಮಾರ್ ನಿನ್ನೆ ಸಂಜೆ 7 ಗಂಟೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಸ್‌ಪಿ ಸ್ಪಷ್ಟೀಕರಣ: 2013ರಲ್ಲಿಯೇ ಅವರು ನನ್ನ ಬಳಿ ಮಗನ ಸಮಸ್ಯೆ ಹೇಳಿಕೊಂಡಿದ್ದರಿಂದ ಅವರನ್ನು ಅಬಕಾರಿ ವಿಚಕ್ಷಣಾ ದಳಕ್ಕೆ ವರ್ಗಾವಣೆ ಮಾಡಿದ್ದೆನು. ಆದರೆ, ಇತ್ತೀಚೆಗೆ ಅವರು ಹೆಡ್‌ಕಾನ್ಸ್‌ಟೆಬಲ್ ಆಗಿ ಬಡ್ತಿ ಹೊಂದಿದ ಕಾರಣ ಅನಿವಾರ್ಯವಾಗಿ ಅವರು ಕೆಆರ್ ಪೇಟೆ ಠಾಣೆಗೆ ಹೋಗಲೇಬೇಕಾಗಿ ಬಂತು. ನನಗೂ ಒತ್ತಡ ಇತ್ತು. ವರ್ಗಾವಣೆ ಮಾಡಲೇಬೇಕಾಯಿತು. ಇದನ್ನೇ ಅವರು ಕಿರುಕುಳ ಎಂದು ಭಾವಿಸಿದರೆ ನಾನೇನು ಮಾಡಲಿ ಎಂದು ಜಿಲ್ಲಾ ಎಸ್‌ಪಿ ಭೂಷಣ್ ಜಿ.ಬೊರಸೆ ಸ್ಪಷ್ಟೀಕರಣ ನೀಡಿದ್ದಾರೆ. ಮೃತರ ಮನೆಗೆ ತೆರಳಿದ ಭೂಷಣ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Write A Comment