ಕರ್ನಾಟಕ

ಖಾಸಗಿ ಶಾಲೆಗಳಿಗೆ ಸರ್ಕಾರವೇ ಹಣ ಕೊಟ್ಟು ಮಕ್ಕಳನ್ನು ಸೇರಿಸುವ ಆರ್‌ಟಿಇ ರದ್ದಾಗಬೇಕು

Pinterest LinkedIn Tumblr

baragure

ಬೆಂಗಳೂರು, ಡಿ.20- ಖಾಸಗಿ ಶಾಲೆಗಳಿಗೆ ಸರ್ಕಾರವೇ ಹಣ ಕೊಟ್ಟು ಮಕ್ಕಳನ್ನು ಸೇರಿಸುವ ಆರ್‌ಟಿಇ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು. ಕೆಎಎಸ್ ಸಭಾಂಗಣದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಏರ್ಪಡಿಸಿದ್ದ  ವೈಜ್ಞಾನಿಕ-ಪ್ರಜಾತಾಂತ್ರಿಕ ತತ್ವಗಳ ಆಧಾರದ ಮೇಲೆ ಪಠ್ಯಪುಸ್ತಕಗಳ ರಚನೆಗಾಗಿ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ತಾನು ನಡೆಸುವ ಶಾಲೆಗಳ ಮೇಲೆ ನಂಬಿಕೆ ಕಳೆದುಕೊಂಡಿದೆ. ಆರ್‌ಟಿಇ ಕಾಯ್ದೆ ಮೂಲಕ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ವಾರ್ಷಿಕ 165 ಕೋಟಿ ರೂ.ಗಳನ್ನು ನೀಡುತ್ತಿದೆ. ಇಷ್ಟು ಹಣವನ್ನು ಸರ್ಕಾರಿ ಶಾಲೆಗಳ ಗುಣಮಟ್ಟ ಅಭಿವೃದ್ಧಿಗೆ ಬಳಸಬಹುದಾಗಿತ್ತು ಎಂದು ಅವರು ಹೇಳಿದರು.

ಈ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೆ ತಂದಿದೆ. ಕೇಂದ್ರದ ಕಾಯ್ದೆ ಎಂಬ ಕಾರಣಕ್ಕಾಗಿ ರಾಜ್ಯಸರ್ಕಾರಗಳು ಇದನ್ನು ಅನುಸರಿಸುತ್ತಿವೆ. ಕಾಯ್ದೆಯಲ್ಲಿ  ರುವುದನ್ನೆಲ್ಲಾ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದೇನೂ ಇಲ್ಲ. ಹಾಗಾಗಿ ಆರ್‌ಟಿಇ ಕಯ್ದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಇಲ್ಲವೇ, ರದ್ದು ಮಾಡಿಬಿಡಲಿ ಎಂದು ತಿಳಿಸಿದರು.

ರಾಜ್ಯದಲ್ಲಿ 36 ಸಾವಿರ ಅಧ್ಯಾಪಕರ ಕೊರತೆ ಇದೆ. 6 ಸಾವಿರ ಹುದ್ದೆ ಖಾಲಿ ಇದೆ. ಈ ಕ್ಷೇತ್ರ ಅನುತ್ಪಾದಕ ಎಂಬ ಕಾರಣಕ್ಕಾಗಿ ಸರ್ಕಾರಗಳು ಇದನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಕ್ತ ಆರ್ಥಿಕ ನೀತಿ ಎಂದರೆ ಎಲ್ಲದರಲ್ಲೂ ಉತ್ಪಾದನೆ ಬಯಸುವುದು. ಶಿಕ್ಷಣದಿಂದ ಉತ್ಪಾದನೆ ಇಲ್ಲ ಎಂಬ ಭಾವನೆ ಸರ್ಕಾರಗಳಿಗೆ ಇದೆ. ಆದರೆ ಈ ಶಿಕ್ಷಣ ಕ್ಷೇತ್ರ ದೇಶಕ್ಕೆ ಅಕ್ಷರಸ್ಥರು ಜ್ಞಾನಿಗಳನ್ನು ಕೊಡುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಎಂಬುದು ಮಾರುಕಟ್ಟೆಯಾಗಿಬಿಟ್ಟಿದೆ. ಒಂದೇ ವಯಸ್ಸಿನ ಮಕ್ಕಳು  ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆ,  ಖಾಸಗಿ ಶಾಲೆಗಳಲ್ಲಿ ಕಲಿಯುತ್ತವೆ. ಹಾಗಾಗಿ ಬೇರೆ ಬೇರೆ ಪಠ್ಯ ವಿಷಯಗಳನ್ನು ಅವರು ಕಲಿಯುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ  ತಾರತಮ್ಯ ಉಂಟಾಗುತ್ತದೆ ಎಂದರು. ಮೊರಾರ್ಜಿ ವಸತಿ ಶಾಲೆಗಳು ನವೋದಯ ಶಾಲೆಗಳ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.   ಯಾವುದೇ ಪಕ್ಷ  ಅಧಿಕಾರಕ್ಕೆ ಬಂದಾಗಲೂ ಪಠ್ಯಗಳ ಪರಿಷ್ಕರಣೆಗೆ  ಮುಂದಾಗುತ್ತವೆ.ತಾವು ನಂಬಿದ ಧರ್ಮ ಸಿದ್ಧಾಂತಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಸರಿಯಲ್ಲ.  ಸಂವಿಧಾನದ ಆಶಯಗಳಾದ ಲಿಂಗತಾರತಮ್ಯ ನಿವಾರಣೆ, ಸಮಾನತೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ನ್ಯಾಯ, ಬಹುಸಮಾಜತ್ವ ಇವುಗಳ ಆಧಾರದಲ್ಲಿ ಪಠ್ಯಪುಸ್ತಕ ರಚನೆಯಾಗಬೇಕು ಎಂದು ತಿಳಿಸಿದರು.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರವರ ಸಿದ್ಧಾಂತಗಳಿಗೆ ತಕ್ಕಂತೆ ಪಠ್ಯರಚನೆ ಮಾಡಲು ಮುಂದಾಗುವುದು ಸರಿಯಲ್ಲ ಎಂದು ಹೇಳಿದ ಅವರು, 2005ರಲ್ಲಿ ರಾಷ್ಟ್ರೀಯ ಪಠ್ಯ ಪ್ರಾಧಿಕಾರ 28 ಸಮಿತಿಗಳನ್ನು ರಚನೆ ಮಾಡಿ ಎಲ್ಲರಿಂದ ವರದಿ ಪಡೆದು ಸಂವಿಧಾನದ ಆಶಯದಲ್ಲಿ  ಪಠ್ಯ ರಚನೆಯಾಗಬೇಕೆಂದು ಹೇಳಿದೆ.  ಆದರೆ ರಾಜ್ಯಸರ್ಕಾರಗಳು ಇದನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು.

ಐದನೇ ತರಗತಿಗೆ ಸೆಮಿಸ್ಟರ್ ಪದ್ಧತಿ ಇರುವುದು ಸರಿಯಲ್ಲ. ಈ ಬಗ್ಗೆ ನಾನು ಶಿಕ್ಷಣ ಸಚಿವರ ಜೊತೆ ಚರ್ಚಿಸಿದ್ದೇನೆ. ಕಡ್ಡಾಯ ವಿಭಾಗವಾರು ಸ್ಥಳೀಯ ವಿಷಯಗಳನ್ನು ಆಧರಿಸಿ ಪಠ್ಯಕ್ರಮ ರಚಿಸಲಾಗಿದೆ. ಇದರಿಂದಾಗಿ ಬೆಳಗಾವಿ ವಿಭಾಗದ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಇದ್ದರೆ, ಇತರೆ ವಿಭಾಗಗಳಲ್ಲಿ ಬಸವಣ್ಣನ ಪರಿಚಯವೇ ಇರುವುದಿಲ್ಲ. ಹಾಗಾಗಿ ಇದನ್ನು ರದ್ದು ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಇತಿಹಾಸ ತಜ್ಞಪ್ರೊ. ಷ.ಶೆಟ್ಟರ್ ಮಾತನಾಡಿ, ಬಲಪಂಥೀಯರು ಅಧಿಕಾರಕ್ಕೆ ಬಂದಾಗ ತಮ್ಮ ಸಿದ್ಧಾಂತಗಳನ್ನು ಪಠ್ಯದಲ್ಲಿ ತುರುಕುವ ಆತುರ ತೋರಿಸುತ್ತಾರೆ. ಆದರೆ ಕಾಂಗ್ರೆಸ್‌ನವರಿಗೆ ಈ ಆತುರವಿಲ್ಲ. ಏಕೆಂದರೆ ಅವರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ಅವರಿಗೆ ಯಾರಾದರೂ ಹೇಳಿಕೊಡಬೇಕು ಎಂದರು. ಎಳೆಯ ಮಕ್ಕಳಲ್ಲಿ ಆಲೋಚನೆ ಹುಟ್ಟುಹಾಕುವುದು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು. ಸಂವಾದ ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕ ಡಾ. ಪೃಥ್ವಿ ದತ್ತ ಚಂದ್ರಶೋಭಿ, ಶಿಕ್ಷಣ ಉಳಿಸಿ ಸಮಿತಿಯ ಕಾರ್ಯದರ್ಶಿ ಕೆ.ಉಮಾ, ಪ್ರಾಣಿಶಾಸ್ತ್ರ ಉಪನ್ಯಾಸಕ ಡಾ.ಚಂದ್ರಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment