ಕರ್ನಾಟಕ

ಮತ್ತೊಮ್ಮೆ ಏರಿಕೆಯಾಗಲಿದೆ ಈರುಳ್ಳಿ ಬೆಲೆ

Pinterest LinkedIn Tumblr

erulliಬೆಂಗಳೂರು, ಡಿ.20-ನಿತ್ಯ ಬಳಸುವ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಆಘಾತಕರ ಸುದ್ದಿ ಹೊರಬಿದ್ದಿದೆ.

ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಈರುಳ್ಳಿ ಅಭಾವ ರಾಜ್ಯದಲ್ಲಿ ಮಾತ್ರವಲ್ಲ; ದೇಶಾದ್ಯಂತ ಉಂಟಾಗಿ ಬೆಲೆ ಗಗನಕ್ಕೇರಿತ್ತು. ಪ್ರತಿ ಕೆಜಿಗೆ ಸುಮಾರು ನೂರು ರೂಪಾಯಿವರೆಗೂ ಏರಿಕೆಯಾಗಿತ್ತು. ಈ ಬಾರಿ ರಾಜ್ಯದಲ್ಲಿ ಹಿಂಗಾರು ಹಾಗೂ ಮುಂಗಾರು ಹಂಗಾಮುಗಳೆರಡರಲ್ಲೂ ಮಳೆ ಕೈಕೊಟ್ಟ ಕಾರಣ ಶೇ. 50ರಷ್ಟು ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಮತ್ತೊಮ್ಮೆ ಈರುಳ್ಳಿ ಬೆಲೆ ಏರಿಕೆಯಾಗಿ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುವ ದಿನಗಳು ದೂರವಿಲ್ಲ.

ಈರುಳ್ಳಿ ರಫ್ತಿಗೆ ನಿರ್ಬಂಧ ಹಾಗೂ ಆಮದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡ ಕಾರಣ ಈರುಳ್ಳಿ ಬೆಲೆ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಆದರೆ, ಮುಂದಿನ ದಿನಗಳಲ್ಲಿ ಇದೇ ಬೆಲೆ ಸ್ಥಿರವಾಗಿರುತ್ತದೆ ಎಂಬ ಖಾತ್ರಿ ಇಲ್ಲ.

ಏಕೆಂದರೆ, ರಾಜ್ಯವನ್ನು ಸತತವಾಗಿ ಕಾಡುತ್ತಿರುವ ಬರ ಪರಿಸ್ಥಿತಿ ಹಾಗೂ ಅತಿವೃಷ್ಟಿಯು ಈರುಳ್ಳಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಇದರಿಂದ ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಶೇ.42ರಷ್ಟು ಕಡಿಮೆಯಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗ ತಿಳಿಸಿದೆ. ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ಬೆಳಗಾರರ ಕಣ್ಣಲ್ಲಿ ಆನಂದ ಭಾಷ್ಪವನ್ನು ಸುರಿಸಿಲ್ಲ. ಗ್ರಾಹಕ -ಬೆಳೆಗಾರರಿಬ್ಬರಿಗೂ ಸಂಕಷ್ಟವನ್ನೇ ನೀಡಿದೆ. ಉತ್ತಮ ಬೆಳೆಯೂ ಬಂದಿಲ್ಲ; ಯೋಗ್ಯ ಬೆಲೆಯೂ ಸಿಕ್ಕಿಲ್ಲ. ಪ್ರಸಕ್ತ ಸಾಲಿನಲ್ಲಿ ಈರುಳ್ಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿಲ್ಲ.

ಕಳೆದ ಐದು ವರ್ಷಗಳಲ್ಲಿ ಸರಾಸರಿ ಕ್ವಿಂಟಾಲ್‌ಗೆ 1072 ರೂನಂತೆ ಮಾರಾಟವಾಗಿದೆ. ಅದು ಶೇ.44ರಷ್ಟು ಮಾತ್ರ ನಿಯಂತ್ರಿತ ಮಾರುಕಟ್ಟೆ ಮೂಲಕ ಮಾರಾಟವಾಗಿದ್ದರೆ, ಶೇ.56ರಷ್ಟು ಈ ಮಾರುಕಟ್ಟೆಯಿಂದ ಹೊರಗೆ ಮಾರಾಟ ಮಾಗುತ್ತಿದೆ. ಉತ್ಪಾದನಾಕುಸಿತದಿಂದ ಸರಬರಾಜು ಇಳಿಕೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡಿದ್ದು, ಈ ಬಾರಿ ಪ್ರತಿ ಕ್ವಿಂಟಾಲ್‌ಗೆ  1759ರೂ ಸರಾಸರಿಯಂತೆ ಮಾರಾಟವಾಗುತ್ತಿದೆ ಎಂದು ಆಯೋಗ ವರದಿ ಮಾಡಿದೆ.  ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಆ ಭಾಗದಲ್ಲೇ ಹೆಚ್ಚು ಬರವಿದೆ. ಇದೆ ರೀತಿ ಮಹಾರಾಷ್ಟ್ರ ಸೇರಿದಂತೆ ಈರುಳ್ಳಿ ಬೆಳೆಯುವ ಹಲವು ರಾಜ್ಯಗಳು ಕೂಡ ಬರದ ದವಡೆಗೆ ಸಿಲುಕಿವೆ. ಹೀಗಾಗಿ ಸ್ಥಿರವಾಗಿರುವ ಈರುಳ್ಳಿ ಬೆಲೆ ಏರಿಕೆಯಾಗುವ ದಿನಗಳು ದೂರವಿಲ್ಲ.

Write A Comment