ಕರ್ನಾಟಕ

ಹೊಸ ವರ್ಷಾಚರಣೆ ವೇಳೆ ಪೊಲೀಸರ ಹದ್ದಿನ ಕಣ್ಣು : ಕುಡಿದು ಗಾಡಿ ಹತ್ತಿದರೆ ಗ್ರಹಚಾರ ಬಿಡಿಸ್ತಾರೆ

Pinterest LinkedIn Tumblr

hosaಬೆಂಗಳೂರು, ಡಿ.21- ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಗುಂಡು ಪ್ರಿಯರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾನಮತ್ತರಾಗಿ ವಾಹನ ಓಡಿಸುವವರ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ ಹುಷಾರ್. ವರ್ಷಾಚರಣೆ ಗುಂಗಿನಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವವರಿಗೆ ಕಾದಿದೆ ಗ್ರಹಚಾರ. ಹೊಸ ವರ್ಷದ ಸಂಭ್ರಮದ ಅಂಗವಾಗಿ ಸಂಚಾರಿ ಪೊಲೀಸರು ರಿಯಾಯಿತಿ ನೀಡಿರುತ್ತಾರೆ.

ಅದೊಂದು ದಿನ ಕುಡಿದು ವಾಹನ ಚಲಾಯಿಸಿ, ಬಚಾವಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದು ಒಳ್ಳೆಯದು. ಡಿ.31 ರಂದು ಇಡೀ ರಾತ್ರಿ ನಗರ ಸಂಚಾರಿ ವಿಭಾಗದ ಎಲ್ಲಾ ಪೊಲೀಸರು ಮತ್ತು ಸಿಬ್ಬಂದಿ ಆಲ್ಕೋಮೀಟರ್‌ನೊಂದಿಗೆ ರಸ್ತೆಯಲ್ಲಿ ನಿಂತು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸಿಕ್ಕಿಬಿದ್ದರೆ ದಂಡ ವಿಧಿಸುವುದು ತಮ್ಮ ವಾಹನಗಳನ್ನು ವಶಪಡಿಸಿಕೊಳ್ಳುವುದು ಖಚಿತ.

ಸಂಚಾರಿ ಭವನದಲ್ಲಿ ಇಂದು ನಗರದ ಸ್ವಚ್ಚತೆ ಹಾಗೂ ಸುರಕ್ಷತೆಗಾಗಿ ಪೊಲೀಸರು ಜನಾಗ್ರಹ ಹಾಗೂ ಜೂಮ್‌ಕಾರ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ನಗರ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಅವರು, ಡಿಸೆಂಬರ್‌ನಲ್ಲಿ ಚಳಿ ಹೆಚ್ಚಿರುವುದರಿಂದ ಮದ್ಯಪಾನದ ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ.  ಈ ತಿಂಗಳ 20 ದಿನಗಳಲ್ಲಿ ಅಪಘಾತದಿಂದ 48 ಜನ ಮೃತಪಟ್ಟಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಕುಡಿದು ವಾಹನ ಚಲಾಯಿಸುವವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಈಗಾಗಲೇ ಎಲ್ಲೆಡೆ ತಪಾಸಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಡಿ.31 ರಂದು ಸಂಚಾರಿ ಪೊಲೀಸರು 225 ಆಲ್ಕೋಮೀಟರ್‌ಗಳ ಜೊತೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಪರಿಶೀಲಿಸುವ ಕಾರ್ಯ ಕೈಗೊಳ್ಳುತ್ತಾರೆ. ಇಡೀ ರಾತ್ರಿ ಅವರು ಕಾರ್ಯಾಚರಣೆ ನಡೆಸಲಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ ಎಂದರು. ಒಂದು ವೇಳೆ ಹೊಸ ವರ್ಷದ ಮೋಜಿಗಾಗಿ ಮದ್ಯಪಾನ ಮಾಡಿದವರು ಸಾರ್ವಜನಿಕ ಸಂಪರ್ಕ ವಾಹನಗಳನ್ನು ಬಳಸಬೇಕು. ಸಂಚಾರಿ ಪೊಲೀಸ್ ಮನವಿ ಮೇರೆಗೆ ಬಿಎಂಟಿಸಿ ಮತ್ತು ಮೆಟ್ರೋ ರೈಲು ಇಡೀ ರಾತ್ರಿ ಸಂಚರಿಸಲಿವೆ. ಕ್ಲಬ್ ಹಾಗೂ ಇತರ ಮನೋರಂಜನಾ ಸ್ಥಳಗಳಿಗೆ ತೆರಳುವವರು ಮದ್ಯಪಾನ ಮಾಡಿದರೆ ಟ್ಯಾಕ್ಸಿ ಮತ್ತು ಆಟೋ ಬಳಸಿಕೊಳ್ಳಬೇಕು. ಆ ವಾಹನಗಳ ಚಾಲಕರು ಮದ್ಯಪಾನ ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಂದು ರಾತ್ರಿ ನಗರದ ಎಲ್ಲಾ ಮೇಲ್ಸೇತುವೆಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ. ಪಾರ್ಟಿ ಮುಗಿಸಿಕೊಂಡು ರಾತ್ರಿ 1 ಗಂಟೆಗೆ ಮನೆಗೆ ವಾಪಸ್ ಹೋಗುವವರು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಈ ತಿಂಗಳಿನಲ್ಲಿ ಕೆಲವು ಟ್ಯಾಕ್ಸಿ ಚಾಲಕರು ಹಗಲಿನಲ್ಲೂ ಕುಡಿದು ವಾಹನ ಚಲಾಯಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಹಾಗಾಗಿ ಸಂಚಾರಿ ಪೊಲೀಸರು ಹಗಲಿನಲ್ಲೂ ಡಿ.26 ರಿಂದ ತಪಾಸಣೆ ನಡೆಸಲಿದ್ದಾರೆ. ಈಗಾಗಲೇ ಡಿ.9 ರಿಂದ ಆಲ್ಕೋಮೀಟರ್‌ನೊಂದಿಗೆ ತಪಾಸಣೆ ನಡೆಸುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಝೂಮ್‌ಕಾರ್ ಸಂಸ್ಥೆಯ ಸಿಇಒ ಗ್ರೇಗ್ ಮೋರನ್, ಜನಾಗ್ರಹ ಸಂಸ್ಥೆಯ ಸ್ವಪ್ನ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Write A Comment