ಕರ್ನಾಟಕ

346 ಕೋಟಿ ರೂ.ಗಳ ಹೊಸ ಕೃಷಿ ಸಾಲ ವಿತರಣೆ

Pinterest LinkedIn Tumblr

krushiಬೆಂಗಳೂರು, ಡಿ.21-ರೈತರ ಸರಣಿ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ರಾಜ್ಯ ವಿವಿಧೆಡೆ ಸಲಹಾ ಶಿಬಿರ, ಜಾಗೃತಿ ಜಾಥಾಗಳನ್ನು ನಡೆಸಿದ್ದು, ಈ ವರ್ಷ ಬರಪೀಡಿತ ಪ್ರದೇಶಗಳಿಗೆ ಒಟ್ಟು 346 ಕೋಟಿ ರೂ.ಗಳ ಹೊಸ ಕೃಷಿ ಸಾಲ ವಿತರಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ  ಹಾಗೂ ಬ್ಯಾಂಕ್‌ಗಳು ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಆರ್.ಎಸ್.ಪಾಂಡೆ ತಿಳಿಸಿದ್ದಾರೆ.  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ  ರಾಜ್ಯಮಟ್ಟದ ಬ್ಯಾಂಕರ್‌ಗಳ 133ನೆ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 136 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಇತ್ತೀಚೆಗೆ  ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿದೆ ಎಂದು ಹೇಳಿದರು.

253.88 ಕೋಟಿ ಮೊತ್ತದ 15,301 ಕೃಷಿ ಅವಧಿ ಸಾಲಗಳನ್ನು ಮರುಸಾಲಗಳನ್ನಾಗಿ ಪರಿವರ್ತಿಸಲಾಗಿದೆ. 400.66 ಕೋಟಿ ಮೊತ್ತದ 31.057 ಬೆಳೆ ಸಾಲಗಳನ್ನು ಅವಧಿ ಸಾಲಗಳನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ ಸಾಲವಸೂಲಾತಿಗೆ ಒತ್ತಡ ಹೇರದಿರಲು ನಿರ್ಧರಿಸಲಾಗಿದೆ ಎಂದರು.

12042 ಜನರಿಗೆ ಹೊಸದಾಗಿ 180.25 ಕೋಟಿ, 12183 ಜನರಿಗೆ 165.74 ಕೋಟಿ ಹೊಸ ಕೃಷಿ ಅವಧಿ ಸಾಲಗಳನ್ನು  ಪರಿಹಾರವಾಗಿ ವಿತರಿಸಲಾಗಿದೆ. ಈ ಮೂಲಕ ಸುಮಾರು 24 ಸಾವಿರಕ್ಕೂ ಹೆಚ್ಚು ಜನರಿಗೆ 346 ಕೋಟಿ ರೂ.ಗಳನ್ನು ಬರಪ್ರದೇಶಗಳಿಗಾಗಿಯೇ ನೇರವಾಗಿ ವಿತರಿಸಲಾಗಿದೆ ಎಂದರು. ಮನೆಯ ಮೇಲ್ಛಾವಣಿ ಮೇಲೆ ಸೌರಶಕ್ತಿ ಉತ್ಪಾದನಾ ಗ್ರಿಡ್‌ಗಳನ್ನು ಅಳವಡಿಸಿಕೊಳ್ಳಲು ಆರ್ಥಿಕ ನೆರವು ನೀಡುವಂತೆ ಎಸ್ಕಾಂ ಮನವಿ ಮಾಡಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿಯವರ ಸ್ಮಾರ್ಟ್ ಆಫ್ ಇಂಡಿಯಾ ಹೊಸ ಯೋಜನೆಗೆ 1.25ಲಕ್ಷ ಬ್ಯಾಂಕ್ ಶಾಖೆಗಳ ಮೂಲಕ ಬುಡಕಟ್ಟು ಪ್ರದೇಶಗಳಲ್ಲಿರುವ ನಿಮ್ನ ವರ್ಗಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ನಿರ್ಧರಿಸಿವೆ. ಈ ಯೋಜನೆಯಡಿ ಈವರೆಗೂ 35 ಬುಡಕಟ್ಟು, 608 ದಲಿತ, 7182 ಮಹಿಳಾ ಉದ್ಯಮಿಗಳಿಗೆ ಹಣಕಾಸು ನೆರವು ನೀಡಲಾಗಿದೆ  ಅವರು ವಿವರಿಸಿದರು.

ರಾಜ್ಯದಲ್ಲಿ 2015, ಸೆ.30 ಅಂತ್ಯದವರೆಗೆ 112460 ಕೋಟಿ ರೂ. ಸಾಲ ನೀಡಿ ಶೇ.48.93ರಷ್ಟು ಗುರಿ ಸಾಧಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 62620 ಕೋಟಿ ಸಾಲ ನೀಡಬೇಕಿದ್ದು, 34225 ಕೋಟಿ ಸಾಲ ವಿತರಿಸಲಾಗಿದೆ. ಇದರಲ್ಲಿ ಬೆಳೆ ಸಾಲಕ್ಕೆ 14,891 ಕೋಟಿ ರೂ. ನೀಡಲಾಗಿದೆ. ಕಿರು ಉದ್ಯಮಿಗಳಿಗೆ 15,250 ಕೋಟಿ ರೂ.ಗಳನ್ನು, ಶಿಕ್ಷಣಕ್ಕೆ 2989 ಕೋಟಿ ರೂ. ಗುರಿಗೆ ಎದುರಾಗಿ 671 ಕೋಟಿ, ವಸತಿಗೆ 14,459 ಕೋಟಿ ಗುರಿಗೆ ಎದುರಾಗಿ 2209 ಕೋಟಿ, ಆದ್ಯತಾ ಕ್ಷೇತ್ರಗಳಿಗೆ 14,287 ಕೋಟಿ ರೂ. ಗುರಿಗೆ ಎದುರಾಗಿ 2669 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.  ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ 27.87 ಲಕ್ಷ ಶೂನ್ಯ ಮೊತ್ತದ ಖಾತೆ ಸೇರಿ 83.22 ಲಕ್ಷ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ 878.98 ಕೋಟಿ ರೂ. ಹಣವನ್ನು ಖಾತೆದಾರರ ಹೆಸರಿನಲ್ಲಿ ಉಳಿಸಲಾಗಿದೆ. ರಾಜ್ಯ ಸರ್ಕಾರದ ಸೂಚನೆ ಆಧರಿಸಿ ಆದ್ಯತಾ ಕ್ಷೇತ್ರಗಳಿಗೆ ಇನ್ನಷ್ಟು ಒತ್ತು ನೀಡುವುದಾಗಿ ಅವರು  ತಿಳಿಸಿದರು.

Write A Comment